ಜಾರಿಯಾಗದ ಸರ್ಕಾರಿ ಆದೇಶ: ವಿದ್ಯಾರ್ಥಿಗಳ ಬೆನ್ನಿಗೆ ಭಾರವಾದ ಬ್ಯಾಗಿನ ಹೊರೆ

ಉತ್ತರ ಕನ್ನಡ: ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳ ಹಿತದೃಷ್ಠಿಯಿಂದ ಬ್ಯಾಗ್ ಲೆಸ್ ಡೇ ಹಾಗೂ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದೇಹದ ಸರಾಸರಿ ತೂಕದ ಶೇ.10ರಷ್ಟು ಮೀರದಂತೆ ಶಾಲಾ ಬ್ಯಾಗಿನ ತೂಕ ಇರಬೇಕು, ಮತ್ತು 1 ರಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡದಂತೆ ಆದೇಶಿಸಿದೆ. ಈ ಆದೇಶ ಸರ್ಕಾರಿ, ಅನುಧಾನಿತ, ಅನುಧಾನ ರಹಿತ ಶಾಲೆಗಳಿಗೆ ಅನ್ವಯಿಸುತ್ತದೆ. ಆದರೆ ಈ ಆದೇಶ ಶಾಲೆ ಪ್ರಾರಂಭವಾದರೂ ಉತ್ತರ ಕನ್ನಡ ಜಿಲ್ಲೆಯ ಯಾವ ತಾಲೂಕುಗಳಲ್ಲೂ ಜಾರಿಯಲ್ಲಿ ಬಂದಿಲ್ಲ. ಈ ಕುರಿತು ಆದೇಶ ಎಲ್ಲೆಡೆ ಬಂದಿದ್ದರೂ ಶಾಲಾ ಮುಖ್ಯಸ್ಥರಾಗಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಕ್ರಮ ಕೈಗೊಂಡಿಲ್ಲ. ಸರ್ಕಾರ ಸುತ್ತೋಲೆಯ ಮುಖಾಂತರ ಭಾರದ ಬ್ಯಾಗ್ ಹೊತ್ತು ಬರುತ್ತಿರುವ ಚಿಣ್ಣರ ಕುರಿತು ಚಿಂತನೆ ಹಾಗೂ ಮೂಳೆ ತಜ್ಞರಿಂದ ಸಲಹೆ ಪಡೆದು ಬ್ಯಾಗಿನ ಅತಿಯಾದ ಭಾರದಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಬಗ್ಗೆ ಸುತ್ತೋ ತಿಯಲ್ಲಿ ಎಚ್ಚರಿಸಿದೆ.ಸರ್ಕಾರಿ ಆದೇಶದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ಲೆಸ್ ಡೇ, ಸಂಭ್ರಮ ಶನಿವಾರ ಆಚರಿಸುವಂತೆ ತಿಳಿಸಿದೆ. ವಿದ್ಯಾರ್ಥಿಗಳ ಬ್ಯಾಗಿನ ತೂಕ ಎಷ್ಟಿರಬೇಕೆಂದು ಸ್ಪಷ್ಟಪಡಿಸಿದೆ.1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗಿನ ತೂಕ 1.5ಕೆ.ಜಿ.ಯಿಂದ 2 ಕೆ.ಜಿ. ಮೀರುವಂತಿಲ್ಲ.3 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗಿನ ತೂಕ 2 ರಿಂದ 3 ಕೆ.ಜಿ, 6ರಿಂದ 8 ನೇ ತರಗತಿ ವಿದ್ಯಾರ್ಥಿಗಳ ಬ್ಯಾಗಿನ ತೂಕ 3ರಿಂದ 4 ಕೆ. ಜಿ.9 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗಿನ ತೂಕ 4 ರಿಂದ 5 ಕೆ. ಜಿ.ಇರಬೇಕು ಎಂದು ಸಕಾ೯ರ ಸೂಚಿಸಿದೆ. ಈ ವಿಷಯವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರನ್ನು ಪ್ರಶ್ನಿಸಿದ್ದು, ಉಪ ನಿರ್ದೇಶಕರು ಸರ್ಕಾರದ ಆದೇಶ ಇರುವುದನ್ನು ಒಪ್ಪಿಕೊಂಡಿದ್ದು, ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಸರ್ಕಾರದ ಆದೇಶವನ್ನು ಜಾರಿಯಲ್ಲಿ ತರಲು ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ.