ಬೆಂಗಳೂರು: ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ನೀರಿನ ಸಂರಕ್ಷಣೆಗಾಗಿ ನಡೆಸಿದ್ದ ‘ಜಲವೇ ಜೀವ’ ಅಭಿಯಾನಕ್ಕಾಗಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಜಲಸಂರಕ್ಷಣೆಯಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧನೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗಿನ್ನಿಸ್ ತಂಡದಿಂದ ಗಿನ್ನಿಸ್ ವಿಶ್ವದಾಖಲೆ ಅಧಿಕೃತ ಪ್ರಮಾಣಪತ್ರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಬೆಂಗಳೂರು ನಗರದಲ್ಲಿ ಜನಸಂಖ್ಯೆ ಬೃಹದಾಕಾರವಾಗಿ ಬೆಳೆದಿರುವ ಕಾರಣಕ್ಕೆ ಗ್ರೇಟರ್ ಬೆಂಗಳೂರು ಆಗಿ ಪರಿವರ್ತನೆ ಮಾಡಿದ್ದೇವೆ. ಜಲಮಂಡಳಿಯು ಕಳೆದ 10 ವರ್ಷದಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ವರ್ಷಕ್ಕೆ ಸುಮಾರು 400 ರಿಂದ 500 ಕೋಟಿ ರೂ. ನಷ್ಟ ಆಗುತ್ತಿದೆ ಎಂಬ ಮಾಹಿತಿಯಿದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜಲಮಂಡಳಿಗೆ ವಾರ್ಷಿಕವಾಗಿ ನಷ್ಟವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಯಾರಿಗೂ ತೊಂದರೆ ಆಗದಂತೆ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಜಾರಿಗೊಳಿಸುವ ಸಂದರ್ಭ ಹಲವು ಸವಾಲುಗಳು ಎದುರಾದವು. ಸುಮಾರು 2 ಕೋಟಿ ಜನಸಂಖ್ಯೆಗೆ ಶುದ್ಧವಾದ ನೀರನ್ನು ಒದಗಿಸಲು ಕಾವೇರಿ 6ನೇ ಹಂತದ ಡಿಪಿಆರ್ ಸಿದ್ಧತೆ ನಡೆಸಲಾಗುತ್ತದೆ. ಅಲ್ಲಲ್ಲಿ ಕಾವೇರಿ ನೀರಿನ ದುರ್ಬಳಕೆಯೂ ಆಗುತ್ತಿದೆ. ಶೇ.30ರಷ್ಟು ಜನರು ಕಾವೇರಿ ನೀರಿನ ಶುಲ್ಕವನ್ನು ಪಾವತಿಸುವುದಿಲ್ಲ. ಜಲಮಂಡಳಿ ವತಿಯಿಂದ ಆಯೋಜಿಸಿದ್ದ ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಜಲಮಂಡಳಿ ಅವರಿಗೆ ಜವಾಬ್ದಾರಿಯನ್ನು ವಹಿಸಿದ್ದೆ. ಜಲಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ಅವರು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಮನುಷ್ಯ, ಪ್ರಾಣಿಗಳು ಸೇರಿದಂತೆ ಪ್ರತಿಯೊಂದು ವರ್ಗದವರಿಗೂ ನೀರು ಅತ್ಯಗತ್ಯ. ಗಂಗೆಯನ್ನು ಉಳಿಸಲು 5 ಲಕ್ಷಕ್ಕೂ ಹೆಚ್ಚು ಜನರು ಜಲಸಂರಕ್ಷಣೆ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿ, ಮತ್ತೊಬ್ಬರಿಗೂ ಜಾಗೃತಿ ಮೂಡಿಸುತ್ತಿದ್ದಾರೆ. ನಾವೆಲ್ಲರು ಸೇರಿ ಪರಿಸರವನ್ನು ಉಳಿಸುವ ಕೆಲಸವನ್ನು ಮಾಡಿದಾಗ ನೀರಿನ ಮಟ್ಟ ಹೆಚ್ಚಾಗುತ್ತದೆ. ಪರಿಸರ ಸಂರಕ್ಷಣೆಗಾಗಿ ಶಾಲೆಗಳಲ್ಲಿ ಪರಿಸರ ಜಾಗೃತಿ ಕ್ಲಬ್ ರಚಿಸಲಾಗುತ್ತಿದೆ. ಮಕ್ಕಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅತ್ಯಂತ ಕಡಿಮೆ ಸಮಯದಲ್ಲಿ ಜಲಸಂರಕ್ಷಣೆ ಪ್ರತಿಜ್ಞೆ ಸ್ವೀಕರಿಸಿ, ಗಿನ್ನಿಸ್ ವಿಶ್ವದಾಖಲೆಯ ಭಾಗವಾಗಿರುವ ಎಲ್ಲರಿಗೂ ಅಭಿನಂದನೆಗಳು ತಿಳಿಸಿದ್ದಾರೆ.