ಬೀದರ್: ಇಲ್ಲಿಯ ೨ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್‌ಎಫ್‌ಸಿ-೨ ನ್ಯಾಯಾಲಯದ ನ್ಯಾಯಾಧೀಶರಾದ ಎಮ್.ಡಿ. ಶೈಜ್ ಚೌಠಾಯಿ ಮನೆಯಲ್ಲಿ ಇದೇ ಏಪ್ರಿಲ್ 1ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಂಡಗಳ ಪೊಲೀಸರು ಕಾರ್ಯಾಚರಣೆ ನಡೆಸಿ ತಂದೆ ಮತ್ತು ಮಗ ಸಹಿತ ಮೂವರು ಆರೋಪಿಗಳನ್ನು ಮಹಾರಾಷ್ಟ್ರದ ಉದಗೀರ್ ರೈಲು ನಿಲ್ದಾಣದಲ್ಲಿ ಮಾಲು ಸಮೇತ ದಸ್ತಗಿರಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ನಾಲ್ಕನೆ ಆರೋಪಿ ಮಹಾರಾಷ್ಟ್ರದ ಔರಂಗಾಬಾದ್‌ನವನಾಗಿದ್ದು ಆತನ ಪತ್ತೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
ಬಂಧಿತ ಮೂವರು ಆರೋಪಿಗಳು ಮಧ್ಯಪ್ರದೇಶದಲ್ಲಿನ `ಪಾರ್ದಿ’ ಗ್ಯಾಂಗ್ ಸಂಗಡ ಗುರುತಿಸಿಕೊಂಡಿದ್ದಾರೆ. ಮತ್ತು ಅಪರಾಧ ಜಗತ್ತಿಗೆ ಇದೀಗ ಧುಮುಕಿದವರಾಗಿದ್ದಾರೆ ಎಂಬುದು ಪೊಲೀಸರ ವಿಶೇಷ ತಂಡಗಳ ತನಿಖೆಯಿಂದ ಗೊತ್ತಾಗಿದೆ. ಜಡ್ಜ್ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದ ೧೦೦ ಗ್ರಾಂ ತೂಕದ ಬಂಗಾರದ ಮತ್ತು ೫೦ ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಯಥಾವತ್ತಾಗಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಇಲ್ಲಿ ಮಂಗಳವಾರ ತಿಳಿಸಿದರು.
ಆರೋಪಿಗಳನ್ನು ಬಂಧಿಸಿ ಜಪ್ತಿ ಮಾಡಿದ ಬಂಗಾರದ, ಬೆಳ್ಳಿಯ ಆಭರಣಗಳನ್ನು ಪತ್ರಿಕಾಗೋಷ್ಟಿಯಲ್ಲಿ ಪ್ರದರ್ಶಿಸಿದ ಅವರು ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿ ಇಲ್ಲಿಯ ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರ ಮೂರು ವಿಶೇಷ ತಂಡಗಳನ್ನು ರಚಿಸಿದ್ದೇವು. ವಿಶೇಷ ತಂಡಗಳು ತೆಲಂಗಾಣ ಹಾಗೂ ಮಹಾರಾಷ್ಟçಕ್ಕೆ ಭೇಟಿ ನೀಡಿದ್ದವು. ಆರೋಪಿಗಳು ಕಳ್ಳತನದ ಪ್ರಕರಣಗಳಲ್ಲಿ ತೆಲಂಗಾಣ ಪೊಲೀಸರಿಗೂ ಕೂಡ ಬೇಕಾದವರಾಗಿದ್ದರು. ತೆಲಂಗಾಣ ಪೊಲೀಸರಿಗಿಂತ ಮುಂಚಿತವಾಗಿವೇ ಆರೋಪಿಗಳನ್ನು ನಾವು ದಸ್ತಗಿರಿ ಮಾಡಿದ್ದೇವೆ ಎಂದು ಬೀದರ್ ಎಸ್‌ಪಿ ಹೆಮ್ಮೆಯ ಧ್ವನಿಯಲ್ಲಿ ನುಡಿದರು.