ನಮ್ಮ ಚೈತನ್ಯವು ಒಂದು ಗ್ರಂಥಾಲಯದಂತೆ. ಒಂದು ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳಿರುತ್ತವೆ. ಗ್ರಂಥಾಲಯದ ಗ್ರಂಥಪಾಲಕರು ಎಲ್ಲ ಪುಸ್ತಕಗಳ ಮೇಲ್ವಿಚಾರಕರಾದರೂ ಪ್ರತಿಯೊಂದು ಪುಸ್ತಕವನ್ನೂ ಬಾಯಿಪಾಠ ಮಾಡಿರಬೇಕೆಂದಿಲ್ಲ. ಯಾವ ಪುಸ್ತಕ ಎಲ್ಲಿದೆಯೆಂದು ಅವರಿಗೆ ತಿಳಿದಿದೆ ಮತ್ತು ಅವಶ್ಯವಾದಾಗ ಪುಸ್ತಕವನ್ನು ತೆರೆದು ಬಳಸಬಹುದು.
ಅದೇ ರೀತಿಯಾಗಿ ನಮ್ಮ ಚೈತನ್ಯವೂ ಸಹ ಎಲ್ಲ ಜ್ಞಾನವನ್ನೂ ಹೊಂದಿರುವ ಗ್ರಂಥಾಲಯ. ಆದರೆ ಎಲ್ಲವನ್ನೂ ಸದಾಕಾಲ ತಿಳಿದಿರುವ ಅಗತ್ಯವಿಲ್ಲ. ದೇಹದಲ್ಲಿದ್ದುಕೊಂಡು ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ. ಆದರೆ ನೀವು ಸ್ತಬ್ಧರಾದಾಗ, ಯಾವ ರಾಗ-ದ್ವೇಷಗಳೂ ಇಲ್ಲದಿದ್ದಾಗ ಮನಸ್ಸು ಪೂರ್ಣವಾಗಿ ಮುಕ್ತವಾಗಿರುತ್ತದೆ. ಆಗ ನೀವು ಗ್ರಂಥಾಲಯದ ಎಲ್ಲ ಜ್ಞಾನವನ್ನೂ ಹೊಂದಿರುವ ಮೇಲ್ವಿಚಾರಕರಂತೆ ಆಗುತ್ತೀರಿ.
ಗ್ರಂಥಾಲಯದ ಮೇಲ್ವಿಚಾರಕರು ಎಲ್ಲ ಜ್ಞಾನವನ್ನೂ ಹೊಂದಿದ್ದು, ಯಾವಾಗ ಬೇಕಾದರೂ ಅದನ್ನು ಉಪಯೋಗಿಸಬಹುದು. ವಕೀಲರ ಬಳಿ ಎಲ್ಲ ಪುಸ್ತಕಗಳಿದ್ದರೂ, ಎಲ್ಲ ಪುಸ್ತಕಗಳಲ್ಲಿರುವ ಪ್ರತಿಯೊಂದು ಪದವನ್ನೂ ಕಲಿಯಬೇಕಿಲ್ಲ. ಆದರೆ ಒಂದು ನಿರ್ದಿಷ್ಟ ಮೊಕದ್ದಮೆ ಬಂದಾಗ ಯಾವ ಪುಸ್ತಕವನ್ನು ತೆಗೆದುಕೊಳ್ಳುವುದು, ಯಾವ ವಿಷಯವನ್ನು ತೆಗೆದುಕೊಂಡು ಹೇಗೆ ಬಳಸುವುದು ಎಂದು ತಿಳಿದಿದೆ.
ಅದೇ ರೀತಿಯಾಗಿ ನಮ್ಮ ಚೈತನ್ಯವು ಎಲ್ಲ ಜ್ಞಾನದ ಆಗರ. ನೀವು ಸ್ತಬ್ಧರಾದಾಗ ಮನಸ್ಸಿನ ವೃತ್ತಿಗಳಿಂದ ಬಿಡುಗಡೆಯನ್ನು ಹೊಂದುತ್ತೀರಿ – ಆಗ ಮಾತ್ರವೇ ನೀವು ಯೋಗಿಗಳು. ಆಗ ನಿಮಗೆ ಎಲ್ಲ ಉತ್ತರಗಳೂ ತಿಳಿಯುತ್ತವೆ. ಆದ್ದರಿಂದಲೇ ಸ್ತಬ್ಧವಾಗಿರುವ ಚೈತನ್ಯವನ್ನು, ಯೋಗಿಯ ಚೈತನ್ಯವನ್ನು `ಸರ್ವಜ್ಞ’ ಎಂದು ಕರೆಯುವುದು. ಆ ಚೈತನ್ಯದಲ್ಲಿದ್ದಾಗ, ನೀವು ಸಮಾಧಿಯ ಸ್ಥಿತಿಯಲ್ಲಿದ್ದಾಗ ಎಲ್ಲವನ್ನೂ ತಿಳಿದಿರುವ ಬೀಜವು ಆ ಚೈತನ್ಯದಲ್ಲಿರುತ್ತದೆ.