ಚಿಕ್ಕಮಗಳೂರಿನಲ್ಲಿ ಭಾರೀ ಮಳೆ ಅವಾಂತರ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆಯುವ ಜೊತೆಗೆ ಸಾಲು ಸಾಲು ಅವಾಂತರಗಳು ಮುಂದುವರೆದಿವೆ.

ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ. ತಾಲೂಕಿನ ಕೈ ಮರ ಚಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ.

ನಿನ್ನೆ ಸಾವಿರಾರು ಪ್ರವಾಸಿ ವಾಹನಗಳು ಗಿರಿ ಪ್ರದೇಶಕ್ಕೆ ಆಗಮಿಸಿದ್ದವು ಒಂದು ವೇಳೆ ನಿನ್ನೆ ಈ ಮರ ಬಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಭಾರೀ ಗಾತ್ರದ ಮರ ಆಗಿರುವುದರಿಂದ ತೆರವು ಮಾಡಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಡುವಂತಾಗಿದೆ.

ಜಿಲ್ಲೆಯಲ್ಲಿ ರಾತ್ರಿ ಇಡೀ ವರುಣನ ಆರ್ಭಟ ಮುಂದುವರೆದಿದ್ದು ಮುಂಜಾಗ್ರತಾ ಕ್ರಮವಾಗಿ ಹಾಗೂ ಮಕ್ಕಳ ಹಿತ ದೃಷ್ಟಿಯಿಂದ ಶಿಶು ಪಾಲನಾ ಕೇಂದ್ರ, ಅಂಗನವಾಡಿ ಹಾಗೂ ಪ್ರಾಥಮಿಕ ಪ್ರೌಢ ಶಿಕ್ಷಣ ಶಾಲೆಗಳಿಗೆ ಜಿಲ್ಲೆಯ ಆರು ತಾಲೂಕುಗಳಲ್ಲಿ ರಜೆ ಘೋಷಿಸಲಾಗಿದೆ.