ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಅಜ್ಜನಗುಡಿ ಸಮೀಪದ ದೇವರ ಎತ್ತುಗಳಿರುವ ಸ್ಥಳವು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಗೋಕ್ಷೇತ್ರವಾಗುತ್ತದೆ ಎಂದು ನರಹರಿ ನಗರದ ಶ್ರೀ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ. ರಾಜಾರಾಮ್ ಗುರುಗಳು ಭವಿಷ್ಯ ನುಡಿದರು.
ನಗರದ ಹೊರವಲಯದಲ್ಲಿರುವ ಶ್ರೀ ಜಗಲೂರು ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಗೆ ಸೇರಿದ ಮುತ್ತಯ್ಯಗಳ ದೇವರ ಎತ್ತುಗಳಿಗಾಗಿ ಚಳ್ಳಕೆರೆ ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಸದಸ್ಯರ ಆರ್ಥಿಕ ನೆರವಿನಿಂದ ನಿರ್ಮಿಸಲಾದ ಎರಡು ಹೊಸ ಶೆಡ್ಡುಗಳ (ಮೇಲ್ಚಾವಣಿ) ಲೋಕಾರ್ಪಣೆಯನ್ನು ನೆರವೇರಿಸಿ, ಗೋಪೂಜೆ ಮಾಡಿ ಆಶೀರ್ವಚನ ನೀಡಿದ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.
ಪೂಜ್ಯ ಗುರುಗಳು ತಮ್ಮ ಆಶೀರ್ವಚನದಲ್ಲಿ, ಬಿಸಿಲು ಮತ್ತು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದ ದೇವರ ಎತ್ತುಗಳಿಗೆ ನೆಮ್ಮದಿಯಾಗಿರಲು ಮೇಲ್ಛಾವಣಿ ನಿರ್ಮಿಸಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು. “ನಾವು ಗೋವಿನಿಂದ ಪಡೆಯುವ ಉಪಯೋಗಗಳು ಅನೇಕ. ಅದರಿಂದ ಉತ್ಪನ್ನವಾಗುವ ವಸ್ತುಗಳು ಮನುಷ್ಯನ ಅನೇಕ ರೋಗಗಳನ್ನು ಗುಣಪಡಿಸುತ್ತವೆ. ಆದ್ದರಿಂದ ಗೋಉತ್ಪನ್ನಗಳನ್ನು ಹೆಚ್ಚು ಬಳಸೋಣ,” ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ, ಶ್ರೀ ನರಹರಿ ಸೇವಾ ಪ್ರತಿಷ್ಠಾನದ ವತಿಯಿಂದ ದೇವರ ಎತ್ತುಗಳಿಗಾಗಿ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು.
ಬನಶ್ರೀ ವೃದ್ಧಾಶ್ರಮದಿಂದ ಆರ್ಥಿಕ ನೆರವು ಘೋಷಣೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕರಾದ ಶ್ರೀಮತಿ ಮಂಜುಳಮ್ಮ, ದೇವರ ಹಸುಗಳನ್ನು ನೋಡಿದಾಗ ತಮಗೆ “ಪುಣ್ಯಕೋಟಿ ಕಥೆ” ನೆನಪಾಗುತ್ತದೆ ಎಂದು ಭಾವುಕರಾದರು. ಇಂತಹ ದೇವರ ಎತ್ತುಗಳನ್ನು ನಿಸ್ವಾರ್ಥವಾಗಿ ಪಾಲನೆ-ಪೋಷಣೆ ಮಾಡುತ್ತಿರುವ ಗೋಪಾಲಕರ ಮತ್ತು ಕಿಲಾರಿಗಳ ಸೇವೆಯನ್ನು ನಿಜಕ್ಕೂ ಮೆಚ್ಚುವಂತಹ ಕಾರ್ಯ ಎಂದು ತಿಳಿಸಿದ ಅವರು, ಬನಶ್ರೀ ವೃದ್ಧಾಶ್ರಮದಿಂದ ದೇವರ ಎತ್ತುಗಳಿಗಾಗಿ ಐದು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು.
ವಾಣಿಜ್ಯೋದ್ಯಮಿಗಳಾದ ಮಂಜುಳ ನಾಗರಾಜ್ ಅವರು ದೇವರ ಎತ್ತುಗಳಿಗಾಗಿ ಶೆಡ್ಡುಗಳನ್ನು ನಿರ್ಮಿಸಿರುವುದನ್ನು ಶ್ಲಾಘಿಸಿದರು. ಅಲ್ಲದೆ, ಪ್ರೇಮಲೀಲಾ ರಾಮಣ್ಣ ಅವರು ಆಧ್ಯಾತ್ಮಿಕ ಜೀವಿ ಇಂದ್ರಮ್ಮನವರ ಹೆಸರಿನಲ್ಲಿ ಐದು ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ಬಾಬು, ಪದ್ಮ, ಶುಭ, ಮೋಹಿನಿ, ಸುಧಾಮಣಿ, ಗಿಡ್ಡ ಓಬಣ್ಣ, ಸಿದ್ದೇಶ್, ಯತೀಶ್ ಎಂ ಸಿದ್ದಾಪುರ, ಪ್ರೇಮಲೀಲಾ, ಹೂವಿನ ಲಕ್ಷ್ಮೀದೇವಮ್ಮ, ಮಹಾದೇವಿ, ನಳಿನಕುಮಾರಿ, ದೀಪಿಕಾ, ಸೋಮಶೇಖರ್, ಚಿನ್ನಯ್ಯ, ಬೋರಯ್ಯ, ನಾಗರಾಜ್, ಚಾಟಿ ಓಬಯ್ಯ, ಕಿಲಾರಿ ಪಾಲಯ್ಯ, ಕಿಲಾರಿ ಓಬಯ್ಯ, ಕಾಟಯ್ಯ, ಪಾಪಯ್ಯ, ಬೋಸಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.