ಚಳಿ ಬಿಡಿಸುವುದೇ ಪ್ರತಿಪಕ್ಷ?

ಬಿ.ಅರವಿಂದ
ಬೆಳಗಾವಿ: ಉತ್ತರ ಮತ್ತು ಕಲ್ಯಾಣ ಕರ್ನಾಟಕದಲ್ಲಿ ರಸ್ತೆ, ಸೇತುವೆ, ಫ್ಲೈ ಓವರ್, ಫುಟ್‌ಪಾತ್, ಚರಂಡಿ ಮತ್ತು ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯಗಳು ಹಾಳಾಗಿ ಹೋಗಿವೆ. ನಗರ-ಪಟ್ಟಣ-ಹಳ್ಳಿಗಳೆಲ್ಲ ಕಳಾಹೀನವಾಗಿವೆ. ರಾಜ್ಯದ ಏಕೈಕ ತ್ರಿವಳಿ ಮಹಾನಗರ ಕ್ಲಸ್ಟರ್ ಆಗಿರುವ ಹುಬ್ಬಳ್ಳಿ-ಧಾರವಾಡ-ಬೆಳಗಾವಿಯಲ್ಲೇ ರಸ್ತೆ ಜಾಲ ಮತ್ತು ಹಾಗೂ ಇನ್ನಿತರ ಮೂಲ ಸೌಕರ್ಯಗಳಿಲ್ಲ. ಅತಿವೃಷ್ಟಿಯಿಂದ ರೈತ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ. ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭ ದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಮತ್ತೊಮ್ಮೆ ಚರ್ಚೆ- ಗಲಾಟೆ- ಶಾಸನಗಳಿಗೆ ಸಾಕ್ಷಿಯಾಗುತ್ತಿದೆ.
ಪ್ರತಿ ಚಳಿಗಾಲದ ಕಲಾಪಾಂತ್ಯದಲ್ಲಿ ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬದ್ಧತೆಯನ್ನು ೨೦೧೨ ರಿಂದ ಎಲ್ಲ ಸರ್ಕಾರಗಳೂ ಪ್ರಕಟಿಸುತ್ತ ಬಂದಿವೆ. ಹಾಗೆಯೇ ಕಳೆದ ಡಿಸೆಂಬರ್ (೨೦೨೩) ಅಧಿವೇಶನದ ಕೊನೇ ದಿನವೂ ಸಿಎಂ ಸಿದ್ದರಾಮಯ್ಯ ಅನೇಕ ಘೋಷಣೆಗಳನ್ನು ಮಾಡಿದರು.
ಇವುಗಳಲ್ಲಿ ಪ್ರಮುಖವಾದವು, ನಂಜುಂಡಪ್ಪ ಸಮಿತಿ ವರದಿ ಅಧ್ಯಯನ ಮಾಡಿ ಉತ್ತರ ಭಾಗಕ್ಕೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ಪೂರಕವಾಗುವಂತೆ ಉನ್ನತ ಸಮಿತಿಯೊಂದರ ನೇಮಕ; ಬೆಳಗಾವಿಯಲ್ಲಿ ೫೦೦ ಎಕರೆ ಫೌಂಡ್ರಿ ಕ್ಲಸ್ಟರ್; ಧಾರವಾಡದಲ್ಲಿ ಮೆಗಾ ಕೈಗಾರಿಕಾ ಪ್ರದೇಶ; ವಿಜಯಪುರದಲ್ಲಿ ಮೆಗಾ ಉತ್ಪಾದನಾ ಕ್ಲಸ್ಟರ್ (೧೫೦೦ ಎಕರೆ) ಸ್ಥಾಪನೆ. ಇವುಗಳ ಸಾಕಾರದ ಬಗ್ಗೆ ವಿಪಕ್ಷ ಪ್ರಶ್ನಿಸಬೇಕಿದೆ.
ಇನ್ನು ನೀರಾವರಿ ತೆಗೆದುಕೊಂಡರೆ, ಈ ವಿಷಯದಲ್ಲಿ ಉತ್ತರ ಮತ್ತು ಕಲ್ಯಾಣ ಕರ್ನಾಟಕದ್ದು ವ್ಯಾಖ್ಯೆಗೆ ನಿಲುಕ ದಂತಹ ಕಣ್ಣೀರ ಕಥೆ’. ಒಂದೂವರೆ ಲಕ್ಷ ಕೋಟಿ ರೂಪಾಯಿ ಅಗತ್ಯವಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಅದಲ್ಲದೇ, ಆಲಮಟ್ಟಿ ಎತ್ತರದ ಕಗ್ಗಂಟು; ಮಹದಾಯಿ ಬಿಕ್ಕಟ್ಟು; ಭದ್ರಾ ಮೇಲ್ದಂಡೆಗೆ ಕೇಂದ್ರದಿಂದ ಬಾರದ ಘೋಷಿತ ೫೩೦೦ ಕೋಟಿ ಹಣ; ತುಂಗಾ ನದಿಗೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣದ ಪ್ರಸ್ತಾಪ ಎಲ್ಲಿತ್ತೋ ಅಲ್ಲೇ ಉಳಿದಿರುವುದು; ಬೆಣ್ಣೆಹಳ್ಳ- ತುಪರಿಹಳ್ಳ ಪ್ರವಾಹ ಸಮಸ್ಯೆಗೆ ಪರಿಹಾರ ಕಾಣದಿರುವುದು; ಮೇಲ್ಭಾಗದ ಮಹಾರಾಷ್ಟ್ರದಲ್ಲಿ ಮಳೆಯಾದಾಗಲೆಲ್ಲ ಕೃಷ್ಣೆ- ಭೀಮೆಯರು ಉಕ್ಕಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಆಸುಪಾಸಿನ ಫಾಸಲೆಯಲ್ಲಿ ಕೃತಕ ನೆರೆ ಬರುವುದು; ಈ ಭಾಗದ ಮಹಾನಗರಗಳಲ್ಲೇ ಕುಡಿಯವ ನೀರಿನ ಸಮಸ್ಯೆ ಇನ್ನೂ ಜೀವಂತವಾಗಿರುವುದು ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳು ಜ್ವಲಂತವಾಗಿವೆ. ಇನ್ನು ಮಹದಾಯಿ ಬಗ್ಗೆಯಂತೂ ಹೇಳುವ ಅಗತ್ಯವೇ ಇಲ್ಲ... ಇದು ಆಗದು ಎಂದು ಎಲ್ಲರೂ ವಿಷಯವನ್ನು ಕೈಬಿಟ್ಟಂತೆ ಕಾಣುತ್ತಿದೆ. ಉತ್ತರ ಮತ್ತು ಈಶಾನ್ಯ ಭಾಗದ ನೀರಾವರಿ ಸಮಸ್ಯೆಗಳ ಪರಿಹಾರ ಹಾಗೂ ಕೇಂದ್ರದಿಂದ ದೊರೆಯಬೇಕಾದ ಅನುಮತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು ಎಂಬುದಾಗಿಯೂ ಸಿಎಂ ಪ್ರಕಟಿಸಿದ್ದರು. ಈ ಬಗ್ಗೆ ಕೂಡ ಕೇಳಬೇಕಾಗಿರುವುದು ಎನ್‌ಡಿಎ ಮೈತ್ರಿಕೂಟದ ನೈತಿಕ ಜವಾಬ್ದಾರಿಯಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ವಿಜಯಪುರ- ಬಾಗಲಕೋಟೆ, ಹಾವೇರಿ- ಗದಗ ಸೇರಿದಂತೆ ಯಾವೊಂದು ನಗರದಲ್ಲೂ ಕನಿಷ್ಠ ೧ ಸಾವಿರ ಉದ್ಯೋಗ ಸೃಜಿಸಿದ ಅಥವಾ ಸೃಜಿಸುವ ಸಾಮರ್ಥ್ಯ ಇರುವ ಉತ್ಪಾದನಾ ಚಟುವಟಿಕೆಗಳೇ ಇಲ್ಲದಾಗಿದೆ. ಮಲೆನಾಡು ಮತ್ತು ಕರಾವಳಿಯ ವಿಶಿಷ್ಟ ಭೂಗೋಳ- ಸಂಸ್ಕೃತಿ ಹೊಂದಿರುವ ಉತ್ತರ ಕನ್ನಡದಲ್ಲಿ ಕಳೆದ ತಿಂಗಳು ನಡೆದ ಮೀನುಗಾರಿಕೆ ಸಮ್ಮೇಳನ ಹೊರತುಪಡಿಸಿದರೆ, ದುಡಿಮೆಯ ದಾರಿಗಳನ್ನು ಕಂಡುಕೊಳ್ಳುವ ಯಾವುದೇ ಚಟುವಟಿಕೆ ಆಗಿಲ್ಲ. ಬಿಯಾಂಡ್ ಬೆಂಗಳೂರು’ ಪುಸ್ತಕದಲ್ಲಷ್ಟೇ ಉಳಿದು ಹೋಗಿದೆ. ಎಫ್‌ಎಂಸಿಜಿ ಕ್ಲಸ್ಟರ್ ಕನಸನ್ನು ಬಿತ್ತಿದ್ದೊಂದೇ ಬಂತು. ವಿಶೇಷ ಹೂಡಿಕೆ ವಲಯದಡಿ ಉದ್ಯಮಿಗಳನ್ನು ಆಕರ್ಷಿಸುವ ಮಾತುಗಳನ್ನು ಆಡಿದ್ದೂ ಆಯ್ತು. ಯಾವುದೂ ಕಣ್ಣಿಗೆ ಕಾಣುತ್ತಿಲ್ಲ. ಕಿತ್ತೂರು ಬಳಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ನಿರ್ಮಿಸುವ ಮಾತು ಯಾವ ಕಡತದ ಅಡಿ ಹೂತು ಹೋಗಿದೆ ಬಲ್ಲವರಿಲ್ಲ. ಇವೆಲ್ಲ ಜ್ವಲಂತ ಸಮಸ್ಯೆಗಳಿಗೆ ಈ ಬಾರಿ ಏನು ಮಾತು’ ಯಾವಕಥೆ’? ನಾಡು ಕೇಳುತ್ತಿದೆ.
ಪೋಡಿ ಸಮಸ್ಯೆ
ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಕಂದಾಯ ಭೂಮಿಗಳ ಪೋಡಿ ಸಮಸ್ಯೆ, ಸರ್ವೇ ಸಮಸ್ಯೆ, ಭೂ ದಾಖಲಾತಿ ಹಾಗೂ ಬಗರ್‌ಹುಕುಂ ಸಮಸ್ಯೆಗಳಿವೆ. ಟ್ರಿಬ್ಯೂನಲ್‌ಗಳಲ್ಲಿ ತೀರ್ಮಾನವಾದಂತಹ ವಿಷಯಗಳು ಅನುಷ್ಠಾನಕ್ಕೆ ಬಂದಿಲ್ಲ. `ಇ-ಸ್ವತ್ತು’ ನಗರ ಪ್ರದೇಶಗಳಲ್ಲಿ ಪಾರದರ್ಶಕತೆಯಿಂದ ದೂರವಾಗಿರುವ ದೂರುಗಳಿವೆ. ಸರ್ಕಾರ ಇದಕ್ಕೊಂದು ಪರಿಹಾರ ನೀಡುವಂತೆ ವಿಪಕ್ಷ ಕಲಾಪದಲ್ಲಿ ಧ್ವನಿ ಎತ್ತಬೇಕಾಗಿದೆ.
ಕಾಡಿನ ಮಕ್ಕಳ ಕಣ್ಣೀರು !
ಉತ್ತರ ಕರ್ನಾಟಕದಲ್ಲಿ, ವಿಶೇಷವಾಗಿ ಉತ್ತರ ಕನ್ನಡ, ಬೆಳಗಾವಿ, ಧಾರವಾಡದಲ್ಲಿ ಅರಣ್ಯ ಭೂಮಿ ಅತಿಕ್ರಮಣದಾರರ ಗೋಳು ಜ್ವಲಂತವಾಗಿದೆ. ಕೇಂದ್ರ ಸರ್ಕಾರದ ನೀತಿಯಂತೆ ೧೯೮೦ರ ಪೂರ್ವ ಅತಿಕ್ರಮಣ ಮಾಡಿಕೊಂಡವರಿಂದ ದಂಡ- ಶುಲ್ಕವನ್ನು ಸರ್ಕಾರವೇ ವಸೂಲಿ ಮಾಡಿಕೊಂಡು, ಇವರನ್ನು ಅರಣ್ಯದಂಚಿನ ಕೃಷಿಕರು ಎಂಬುದಾಗಿ ಒಪ್ಪಿಕೊಂಡಿದೆ. ಮಂಜೂರಾತಿ ಪತ್ರವನ್ನು ಕೊಟ್ಟಿದೆ. ಆದರೂ ಆರ್‌ಆರ್‌ನಲ್ಲಿ (ಉತಾರ) ಅರಣ್ಯ ಇಲಾಖೆಯ ಅಧಿಕಾರ ಹಾಗೇ ನಮೂದಾಗಿದೆ. ಇದರಿಂದ ಸಾಲ ಸೌಲಭ್ಯ ಪಡೆದುಕೊಂಡು ಜಮೀನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ.
ಇದೇ ರೀತಿ ವಾರಸಾ ಸಮಸ್ಯೆ ಜ್ವಲಂತವಾಗಿದೆ. ಮಂಜೂರಾತಿ ಪಡೆದಾತ ಮೃತನಾದರೆ ವಾರಸುದಾರರ ಹೆಸರು ಉತಾರದಲ್ಲಿ ದಾಖಲಿಸುತ್ತಿಲ್ಲ. ಶರಾವತಿ ಜಲ ವಿದ್ಯುತ್ ಯೋಜನೆಯಿಂದ ಹಿಡಿದು, ಆಲಮಟ್ಟಿ, ಸೀಬರ್ಡ್, ಕೈಗಾ ಈ ಎಲ್ಲ ಯೋಜನೆಗಳಿಗೆ ತ್ಯಾಗ ಮಾಡಿದ ಜನರಿಗೆ ಅರಣ್ಯ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದರೂ ಇನ್ನೂ ಭೂ ಹಕ್ಕು ಸಿಕ್ಕದಿರುವುದು; ೪೦-೫೦ ವರ್ಷಗಳಿಂದ ಈ ತ್ಯಾಗಮಯಿಗಳು ಅತಂತ್ರದ ಬದುಕು ನಡೆಸುತ್ತಿರುವುದು ಅತ್ಯಂತ ಗಂಭೀರ ಸಂಗತಿ. ಪ್ರಸಕ್ತ ಬಾರಿಯಾದರೂ ಬೆಳಗಾವಿಯಲ್ಲಿ ಕುಳಿತು ಅರಣ್ಯ ಮಕ್ಕಳ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ, ಅಥವಾ ಸರ್ಕಾರಕ್ಕೆ ಈ ವಿಷಯವಾಗಿ ಕಟ್ಟಿ ಹಾಕಿ ಪರಿಹಾರ ದೊರೆಯುವಂತೆ ವಿಪಕ್ಷ ಮಾಡಿದರೆ, ಬೆಳಗಾವಿ ಕಲಾಪ ಐತಿಹಾಸಿಕವಾಗಲಿದೆ.
ಅಡಕೆ ಮತ್ತು ಆಸ್ಪತ್ರೆ
ಅಡಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬ ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಜೊತೆಗೆ, ಈ ಬಾರಿಯ ಮಿತಿ ಮೀರಿದ ಮಳೆ ಉತ್ತರ ಕನ್ನಡದ ಅಡಕೆಯನ್ನು ಸಂಪೂರ್ಣ ನೆಲಕಚ್ಚುವಂತೆ ಮಾಡಿದ್ದು, ಬೆಳೆಗಾರ ತಲೆ ಮೇಲೆ ಕೈ ಹೊತ್ತಿದ್ದಾನೆ. ಇದರೊಂದಿಗೆ ಎಲೆಚುಕ್ಕಿ ರೋಗ, ಬೇರು ಹುಳ ರೋಗ, ಹಳದಿ ರೋಗಗಳು ಕಾಡುತ್ತಿವೆ. ಅಡಕೆ ರಾಜ್ಯ ಆರ್ಥಿಕತೆಯ ಪ್ರಧಾನ ವಾಹಕಗಳಲ್ಲಿ ಒಂದಾಗಿರುವ ವಾಣಿಜ್ಯ ಬೆಳೆ. ಆದ್ದರಿಂದ ಸರ್ಕಾರ ಈ ಬಗ್ಗೆ ಮಾತನಾಡಿ ಬೆಳೆಗಾರರ ಆತಂಕ ದೂರವಾಗುವಂತೆ ಮಾಡುವ ಜವಾಬ್ದಾರಿ ಪ್ರತಿಪಕ್ಷಕ್ಕಿದೆ.
ಇದೇ ರೀತಿ, ಉತ್ತರ ಕನ್ನಡಕ್ಕೆ ಅತ್ಯಂತ ಅಗತ್ಯವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಏಕೆ ತಾಂತ್ರಿಕ ನೆಪಗಳನ್ನು ಸರ್ಕಾರ ಮುಂದೊಡ್ಡುತ್ತಿದೆ ಎಂಬುದನ್ನು ನಾಡಿಗೆ ಗೊತ್ತಾಗುವಂತೆ ಮಾಡಬೇಕಿದೆ.