ಚಳ್ಳಕೆರೆ : ತಾಲ್ಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೌಹಾರ್ದತೆಯ ಪ್ರತೀಕವಾಗಿ ಮೊಹರಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ವಿಶೇಷವಾಗಿ, ಹಬ್ಬದ ಕೊನೆಯ ದಿನದಂದು ನಡೆಯುವ ಕೆಂಡ ಹಾಯುವ ಸಂಪ್ರದಾಯದಲ್ಲಿ ಉಭಯ ಸಮುದಾಯದವರೂ ಭಕ್ತಿಭಾವದಿಂದ ಪಾಲ್ಗೊಂಡರು.
ಗ್ರಾಮಸ್ಥರ ಹೇಳಿಕೆಗಳ ಪ್ರಕಾರ, ಮೊಹರಂ ಹಬ್ಬ ಅಥವಾ ಪೀರಲು ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಗ್ರಾಮದ ಹಿರಿಯರಾದ ತಿಮ್ಮಾರೆಡ್ಡಿ ಅವರು ಮಾತನಾಡಿ, ಮೊಹರಂ ಅನ್ನು ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹುಸೇನ್ ಮತ್ತು ಅವರ ಸಹೋದರರ ನೆನಪಿಗಾಗಿ ಆಚರಿಸಲಾಗುತ್ತದೆ. ಜಾತಿ, ಧರ್ಮಗಳ ಭೇದವಿಲ್ಲದೆ ಬಹುತೇಕ ಕಡೆಗಳಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಇದನ್ನು ಆಚರಿಸುವುದು ಗಮನಾರ್ಹ ಎಂದರು.
ಗ್ರಾಮದ ಮತ್ತೊಬ್ಬ ಹಿರಿಯರಾದ ಗೊಂಚಿಕಾರ್ ಪ್ರಕಾಶ್ ರೆಡ್ಡಿ ವಿವರಿಸಿದಂತೆ, ಹತ್ತು ದಿನಗಳ ಕಾಲ ನಡೆಯುವ ಪೀರಲು ಹಬ್ಬದಲ್ಲಿ ಪೆಟ್ಟಿಗೆಯಲ್ಲಿರುವ ದೇವರನ್ನು ಹೊರತೆಗೆದು ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿದಿನ ವಿವಿಧ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಕೊನೆಯ ದಿನವಾದ ಮೊಹರಂ ಅನ್ನು ಎರಡೂ ಸಮುದಾಯದವರು ಸೇರಿ ಅತ್ಯಂತ ವಿಜೃಂಭಣೆಯಿಂದ ಮತ್ತು ಅದ್ದೂರಿಯಾಗಿ ಆಚರಿಸುತ್ತಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ತಿಪ್ಪೇಸ್ವಾಮಿ, ಸದಸ್ಯರಾದ ಅಶ್ವಿನಿ ರುದ್ರಪ್ಪ, ಸೇವ್ಯಾನಾಯ್ಕ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಕಾಶ್ ರೆಡ್ಡಿ, ಗೌಡರ ಚೆನ್ನಪ್ಪ, ಪೂಜಾರಿ ಭೀಮಣ್ಣ, ತಳವಾರ ತಿಮ್ಮೇಶ್, ದಳಪತಿ ತಿಮ್ಮಾರೆಡ್ಡಿ, ರಾಮಾಂಜನೇಯರೆಡ್ಡಿ, ಧನಂಜಯ್, ಶಿಕ್ಷಕರಾದ ವೆಂಕಟೇಶ್, ರುದ್ರಪ್ಪ, ಓಬಣ್ಣ, ಮಲ್ಲೇಶ್, ವೆಂಕಟರೆಡ್ಡಿ, ವಿಶ್ವನಾಥ್, ಮಲ್ಲೇಶ್, ಮಾರಣ್ಣ, ಮೈಕ್ ಸೆಟ್ ತಿಪ್ಪೇಸ್ವಾಮಿ, ರಾಮಣ್ಣ, ಪಾಪಣ್ಣ, ದಾದಪೀರ್, ಆಂಜನೇಯ, ಟಿಪ್ಪುಸುಲ್ತಾನ್, ಹುಸೇನ್ ಸಾಬ್, ದಾದ ಪೀರ್ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.