ಗೌರವ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು: ಮೈಸೂರು ಮುಕ್ತ ವಿಶ್ವವಿದ್ಯಾಲಯ ನೀಡಲು ಮುಂದಾಗಿದ್ದ ಗೌರವ ಡಾಕ್ಟರೇಟ್ (ಡಿ.ಲಿಟ್) ಪದವಿಯನ್ನು ಸಚಿವ ಸತೀಶ್ ಜಾರಕಿಹೊಳಿ ಗೌರವಪೂರ್ವಕವಾಗಿ ನಿರಾಕರಿಸಿದ್ದಾರೆ.
ಈ ಕುರಿತಂತೆ ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಪತ್ರ ಬರೆದಿರುವ ಸಚಿವರು, ಡಾಕ್ಟರೇಟ್​ ಬೇಡ ಎಂದು ಮನವಿ ಮಾಡಿದ್ದಾರೆ. ಮಾರ್ಚ್ 27ರಂದು ವಿಶ್ವವಿದ್ಯಾಲಯವು ಸಚಿವರಿಗೆ ಗೌರವ ಪದವಿ ನೀಡುವುದರ ಮೂಲಕ ಸನ್ಮಾನಿಸಲು ನಿರ್ಧರಿಸಿತ್ತು. ಆದರೆ, ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು, “ಗೌರವ ಡಾಕ್ಟರೇಟ್ ಪದವಿಯನ್ನು ನನಗೆ ಕೊಡುವ ಮೂಲಕ ತಾವು ಸಮಾಜದಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ. ಸಾಮಾಜಿಕ ಸೇವೆಯಲ್ಲಿ ನಾನು ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಫಲಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿರುತ್ತೇನೆ. ಅದನ್ನು ಕಾರ್ಯರೂಪಕ್ಕೆ ತರುವ ಗುರುತರವಾದ ಹೊಣೆಗಾರಿಕೆ ನನ್ನ ಮೇಲಿದ್ದು, ಇನ್ನು ಹೆಚ್ಚಿನ ಕಾಲಾವಕಾಶವಿದೆ, ಈ ಹಿನ್ನಲೆಯಲ್ಲಿ, ತಾವು ಪ್ರೀತಿಪೂರ್ವಕವಾಗಿ ತಮ್ಮ ವಿಶ್ವವಿದ್ಯಾನಿಲಯದ ವತಿಯಿಂದ ನನಗೆ ನೀಡಿದಂತಹ ಗೌರವ ಡಾಕ್ಟರೇಟ್ ಪದವಿಯನ್ನು ಹಿಂಪಡೆಯಲು ಕೋರುತ್ತೇನೆ. ಮುಂದುವರೆದಂತೆ, ನನ್ನ ಈ ನಿರ್ಧಾರವನ್ನು ಅನ್ಯಥಾ ಭಾವಿಸದೇ, ನಾನು ಮನಸೋಯಿಚ್ಛೆ ಕೈಗೊಂಡಿರುವ ನಿರ್ಧಾರವಾಗಿದ್ದು, ತಾವು ಈ ನಿರ್ಧಾರವನ್ನು ಸ್ವಾಗತಿಸುತ್ತೀರೆಂದು ಭಾವಿಸುತ್ತೇನೆ ಎಂದಿದ್ದಾರೆ.