ಗೋಕಾಕ ಜಾತ್ರೆಯಲ್ಲಿ ಬಿಜೆಪಿ ರೆಬೆಲ್ ತಂಡ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಆಹ್ವಾನದ ಮೇರೆಗೆ ಗೋಕಾಕ ಗ್ರಾಮ ದೇವತೆಯ ಜಾತ್ರಾ ಮಹೋತ್ಸವಕ್ಕೆ ಬಿಜೆಪಿ ರೆಬಲ್ ನಾಯಕರ ದಂಡು ಆಗಮಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ಜಾತ್ರಾ ಮಹೋತ್ಸವದ 8ನೇ ದಿನ ಸೋಮವಾರ ಬಿಜೆಪಿ ನಾಯಕರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಶ್ರೀಮಂತ ಪಾಟೀಲ, ಮಾಜಿ ಸಂಸದ ಬಿ.ವಿ. ನಾಯಕ, ಶಾಸಕ ಬಿ.ಪಿ. ಹರೀಶ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ಮುಖಂಡರಾದ ಕಿರಣ ಜಾಧವ ಸೇರಿದಂತೆ ಮಾಜಿ ಶಾಸಕರು, ಬಿಜೆಪಿ ಮುಖಂಡರು ಆಗಮಿಸಿದ್ದರು.
ಶಾಸಕ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಗೆ ಆಗಮಿಸಿದ ನಾಯಕರು ರಮೇಶ ಹಾಗೂ ಪುತ್ರ ಅಮರನಾಥ ಜಾರಕಿಹೊಳಿ ಅವರೊಂದಿಗೆ ಜೊತೆಗೂಡಿ ಮಹಾಲಕ್ಷ್ಮೀ ದೇವಸ್ಥಾನ, ಮೆರಕನಟ್ಟಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದೇವಿಯರ ದರ್ಶನ ಪಡೆದರು. ಶಾಸಕರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದರು. ರಮೇಶ ಜಾರಕಿಹೊಳಿ ಬಿಜೆಪಿ ನಾಯಕರನ್ನು ಸತ್ಕರಿಸಿದರು. ಬಿಜೆಪಿ ನಾಯಕರು ನೋಡುತ್ತಿದ್ದಂತೆ ದೇವಸ್ಥಾನದಲ್ಲಿಯ ಭಕ್ತರು ನಾಯಕರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದರು.
ಲಖನ್ ಮನೆಗೆ ಭೇಟಿ:
ಲಖನ್ ಜಾರಕಿಹೊಳಿ ಅವರ ಆದಿತ್ಯನಗರದ ಮನೆಗೆ ಭೇಟಿ ನೀಡಿದ ನಾಯಕರು ಕೆಲಕಾಲ ಮಾತುಕತೆ ನಡೆಸಿ, ಉಪಹಾರ ಸವಿದರು. ಬಿಜೆಪಿ ನಾಯಕರನ್ನು ಲಖನ್ ಸತ್ಕರಿಸಿದರು.
ಗುಪ್ತ ಸಭೆ:
ಶುಕ್ರವಾರವೇ ಮಹಾಲಕ್ಷ್ಮೀಯ ದರ್ಶನ ಪಡೆದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಕೆಲಕಾಲ ಚರ್ಚೆ ನಡೆಸಿದ್ದರು. ಸೋಮವಾರ ಆಗಮಿಸಿದ ಬಿಜೆಪಿ ನಾಯಕರೊಂದಿಗೆ ಸಹ ರಮೇಶ ಜಾರಕಿಹೊಳಿ ರಹಸ್ಯ ಸಭೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ. 13 ಅಥವಾ 14ರಂದು ಬೆಂಗಳೂರಿನಲ್ಲಿ ರೆಬಲ್‌ ನಾಯಕರು ಸಭೆ ಸೇರಲಿದ್ದಾರೆಂದು ಮಾಹಿತಿ ಲಭ್ಯವಾಗಿದೆ.