ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಏಪ್ರಿಲ್ ತಿಂಗಳ ಹಣ ಸಂದಾಯವಾಗಿದ್ದು, ಮೇ ತಿಂಗಳ ಹಣ ವರ್ಗಾವಣೆ ಆಗಬೇಕಿದೆ. ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಆಗಬೇಕಿದೆ. ನಮ್ಮ ಇಲಾಖೆಯ ಬದಲಾಗಿ ಈಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮೂಲಕ ಹಣ ಸಂದಾಯವಾಗುತ್ತಿದೆ ಎಂದು ಹೇಳಿದರು.
ಪ್ರತಿ ತಿಂಗಳು ೧೦ ರಿಂದ ೧೫ ಸಾವಿರ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ. ನೋಂದಣಿ ಮಾಡಿಕೊಂಡ ಎಲ್ಲಾ ಫಲಾನುಭವಿಗಳಿಗೆ ಹಣ ತಲುಪುತ್ತಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲವರಿಗೆ ತಲುಪಿಲ್ಲ ಎಂದು ಹೇಳಲಾಗಿದೆ. ಎಲ್ಲವೂ ಸರಿಹೋಗುತ್ತಿದೆ ಎಂದರು.