ಗುಳ್ಳೆಗೆಂದು ಕೊಟ್ಟ ಇಂಜೆಕ್ಷನ್ ಪ್ರಾಣ ತೆಗೆಯಿತು….

ಹಾವೇರಿ: ಕೈ ಮೇಲೆ ಗುಳ್ಳೆ ಎದ್ದಿದೆ ಎಂದು ಆಸ್ಪತ್ರೆಗೆ ಬಂದ ಅಪ್ರಾಪ್ತ ವಯಸ್ಸಿನ ಬಾಲಕಿ ವೈದ್ಯರು ನೀಡಿದ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದಾಗಿ ಸಾವನ್ನಪ್ಪಿದ್ದು, ಆಸ್ಪತ್ರೆಯ ಮುಂಭಾಗದಲ್ಲಿ ಪೋಷಕರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಹೆಡ್ಡಿಗೊಂಡ ಗ್ರಾಮದ ವಂದನಾ ಶಿವಪ್ಪ ತುಪ್ಪದ (೧೭) ಮೃತ ಯುವತಿ.
ಕೈ ಮೇಲೆ ಗುಳ್ಳೆ ಎದ್ದಿದೆ ಎಂದು ನಗರದ ಖಾಸಗಿ ಆಸ್ಪತ್ರೆಗೆ ವಂದನಾಳನ್ನು ಕುಟುಂಬಸ್ಥರು ಕರೆತಂದಿದ್ದರು. ಅದಕ್ಕೆ ಸಣ್ಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದ ವೈದ್ಯರು, ಸಲಾಯಿನ್ ಹಚ್ಚಿ ಅದರಲ್ಲೇ ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ಬಳಿಕ ರಿಯಾಕ್ಷನ್ ಆಗಿ ಮೈ ಕೆರೆತ, ಬಾಯಲ್ಲಿ ನೊರೆ ಬಂದು ಕ್ಷಣಾರ್ಧದಲ್ಲೇ ವಂದನಾ ಸಾವನ್ನಪ್ಪಿದ್ದಾಳೆ.
ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬುದು ಕುಟುಂಬಸ್ಥರ ಆರೋಪ. ಆಸ್ಪತ್ರೆ ವೈದ್ಯರು ನಾಪತ್ತೆಯಾಗಿದ್ದಾರೆ. ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ತಾಲೂಕು ವೈದ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಆಸ್ಪತ್ರೆಗೆ ದೌಡಾಯಿಸಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿ, ಈ ಕುರಿತು ಸಮಗ್ರ ಮಾಹಿತಿ ಪಡೆದಿದ್ದು, ಆಸ್ಪತ್ರೆಯನ್ನು ಸದ್ಯಕ್ಕೆ ಸೀಜ್ ಮಾಡಲಾಗುತ್ತದೆ. ಸಮಗ್ರ ವರದಿ ನಂತರ ಹಿರಿಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.