ಗರ‍್ನರ್‌ಗಳ ವಿಟೋಗೆ `ಸುಪ್ರೀಂ’ ಲಕ್ಷ್ಮಣರೇಖೆ

ವಿಧಾನಮಂಡಲಗಳು ಅಂಗೀಕಾರ ನೀಡಿದ ವಿಧೇಯಕಗಳನ್ನು ಇನ್ನುಮುಂದೆ ರಾಜ್ಯಪಾಲರು ಮನಸೋ ಇಚ್ಛೆ ಇಟ್ಟುಕೊಳ್ಳಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ತಮಿಳುನಾಡು ರಾಜ್ಯಪಾಲರು ೧೦ ವಿಧೇಯಕಗಳನ್ನು ತಮ್ಮಲ್ಲೇ ಇಟ್ಟುಕೊಂಡಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯಪಾಲರ ಜೇಬಿನಲ್ಲಿ ವಿಟೋ ಅಧಿಕಾರ ಇಲ್ಲ. ಸಂವಿಧಾನದ ೨೦೦ನೇ ವಿಧಿಯಂತೆ ರಾಜ್ಯಪಾಲರು ಸೀಮಿತ ಅವಧಿಯಲ್ಲಿ ವಿಧೇಯಕಗಳಿಗೆ ಒಪ್ಪಿಗೆ ನೀಡಬೇಕು. ಮನಬಂದಂತೆ ಯಾವುದೇ ತೀರ್ಮಾನ ಕೈಗೊಳ್ಳದೇ ರಾಜಭವನದಲ್ಲೇ ಇಟ್ಟುಕೊಳ್ಳಲು ಬರುವುದಿಲ್ಲ.
ಇನ್ನುಮುಂದೆ ವಿಧಾನಮಂಡಲದ ಅನುಮೋದನೆ ಪಡೆದ ವಿಧೇಯಕಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಅದರ ಬಗ್ಗೆ ಸ್ಪಷ್ಟೀಕರಣ ಬೇಕಿದ್ದರೆ ತಕ್ಷಣ ಕೇಳಬೇಕು. ರಾಷ್ಟ್ರಪತಿಗಳ ಒಪ್ಪಿಗೆ ಬೇಕಿದ್ದಲ್ಲಿ ಅದನ್ನು ಕಳುಹಿಸಿಕೊಡಬೇಕು. ಮರು ಪರಿಶೀಲನೆ ಅಗತ್ಯ ಎನಿಸಿದರೆ ಕೂಡಲೇ ಅದನ್ನು ಹಿಂತಿರುಗಿಸಬೇಕು. ಎರಡನೇ ಬಾರಿ ವಿಧಾನಮಂಡಲದ ಅನುಮೋದನೆ ಪಡೆದ ವಿಧೇಯಕವನ್ನು ರಾಷ್ಟ್ರಪತಿಗೆ ಕಳುಹಿಸಿ ವಿಳಂಬ ತಂತ್ರ ಅನುಸರಿಸಬಾರದು. ಮೂರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕು. ಒಂದು ವೇಳೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದರೆ, ಬೇರೆ ಯಾವುದೇ ಕಾರಣ ಇಲ್ಲದಿದ್ದಲ್ಲಿ ಆ ವಿಧೇಯಕ ಅಂಗೀಕೃತಗೊಂಡಿದೆ ಎಂದೇ ಭಾವಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ರಾಜ್ಯಪಾಲರ ವರ್ತನೆಗೆ ಹಿಡಿದ ಕನ್ನಡಿಯಾಗಿದೆ.
ಮೊದಲಿನಿಂದಲೂ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ತಿಕ್ಕಾಟ ನಡೆದುಕೊಂಡು ಬಂದಿದೆ. ಅದರಲ್ಲೂ ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿದ್ದಾಗ ಲೆಫ್ಟಿನೆಂಟ್ ಗರ‍್ನರ್ ವಿರುದ್ಧ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ಹಿಂದೆ ರಾಜ್ಯಪಾಲರ ಹುದ್ದೆ ವಿವಾದಕ್ಕೆ ಅತೀತವಾಗಿತ್ತು. ರಾಷ್ಟ್ರಪತಿ ಆಳ್ವಿಕೆ ಬಂದರೆ ಮಾತ್ರ ರಾಜ್ಯಪಾಲರ ಪಾತ್ರ ಜನರ ಗಮನಕ್ಕೆ ಬರುತ್ತಿತ್ತು. ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಧರ್ಮವೀರ. ಗೋವಿಂದ ನಾರಾಯಣ್. ಚತುರ್ವೇದಿ, ರಮಾದೇವಿ ಜನಪ್ರಿಯರಾಗಿದ್ದರು. ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸಂವಿಧಾನದ ೩೫೬ನೇ ವಿಧಿಯಂತೆ ರಾಜಭವನದಲ್ಲಿ ಶಾಸಕರ ತಲೆ ಎಣಿಸಿ ಬಹುಮತ ಇಲ್ಲ ಎಂದು ಸರ್ಕಾರವನ್ನು ವಜಾಗೊಳಿಸಲಾಯಿತು. ಅದನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ ಯಾವುದೇ ಸರ್ಕಾರದ ಬಹುಮತ ಶಾಸನಸಭೆಯಲ್ಲಿ ತೀರ್ಮಾನವಾಗಬೇಕು ಎಂದು ಹೇಳಿದ ಮೇಲೆ ರಾಜ್ಯ ಸರ್ಕಾರಗಳನ್ನು ವಜಾಗೊಳಿಸುವ ಹುನ್ನಾರ ನಿಂತು ಹೋಯಿತು.
ರಾಜ್ಯಪಾಲರ ಅಧಿಕಾರ ಮತ್ತು ಕರ್ತವ್ಯ ಕುರಿತು ಸುಪ್ರೀಂ ಕೋರ್ಟ್ ಹಲವು ನಿರ್ದೇಶನಗಳನ್ನು ನೀಡುತ್ತ ಬಂದಿದೆ. ಈಗ ತಮಿಳುನಾಡು ರಾಜ್ಯಪಾಲರ ವರ್ತನೆ ಪ್ರಶ್ನಿಸಿ ಅಲ್ಲಿಯ ಸರ್ಕಾರ ಸಲ್ಲಿಸಿದದ ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿ ನೀಡಿರುವ ತೀರ್ಪು ಎಲ್ಲ ರಾಜ್ಯಪಾಲರಿಗೆ ಅನ್ವಯವಾಗುತ್ತದೆ. ತಮಿಳುನಾಡು ರಾಜ್ಯಪಾಲರು ಮೊದಲಿನಿಂದಲೂ ಅಲ್ಲಿಯ ಸರ್ಕಾರದ ವಿರುದ್ಧ ಕತ್ತಿ ಮಸೆಯುತ್ತ ಬಂದಿದ್ದಾರೆ. ಅಲ್ಲಿಯ ಸರ್ಕಾರ ಕೇಂದ್ರಕ್ಕೆ ರಾಜ್ಯಪಾಲರ ವಿರುದ್ಧ ಹಲವು ಬಾರಿ ದೂರು ಸಲ್ಲಿಸಿದೆ. ಆದರೂ ಕೇಂದ್ರ ಗೃಹ ಇಲಾಖೆ ಕ್ರಮ ಕೈಗೊಂಡಿಲ್ಲ. ಚುನಾಯಿತ ಸರ್ಕಾರ ಇದ್ದಾಗ ರಾಜ್ಯಪಾಲರ ಹೊಣೆ ಕಡಿಮೆ. ಸಂವಿಧಾನಬದ್ಧವಾಗಿ ಸರ್ಕಾರ ನಡೆಯುತ್ತಿದೆಯೇ ಎಂಬುದನ್ನು ಮಾತ್ರ ರಾಜ್ಯಪಾಲರು ನೋಡಬೇಕು. ದಿನನಿತ್ಯದ ಆಗುಹೋಗುಗಳಲ್ಲಿ ಮೂಗು ತೂರಿಸಲು ಬರುವುದಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಲ್ಲಿ ಮಾತ್ರ ರಾಜ್ಯಪಾಲರು ಪ್ರಶ್ನಿಸಬಹುದು.
ಸರ್ಕಾರಿಯಾ ಆಯೋಗ ರಾಜ್ಯಪಾಲರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ವಿವರವಾದ ವರದಿ ನೀಡಿದೆ. ಕೇಂದ್ರ ಸರ್ಕಾರ ರಾಜ್ಯಪಾಲರನ್ನು ನೇಮಕ ಮಾಡುವ ಮುನ್ನ ಆಯಾ ರಾಜ್ಯದ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯಬೇಕೆಂಬ ನಿಯಮವಿದೆ. ಈಗ ಇದು ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ. ಮುಖ್ಯಮಂತ್ರಿ ವಿರೋಧಿಸಿದರೂ ನೇಮಕ ಮಾಡುವ ಪರಿಪಾಠ ಬೆಳೆದಿದೆ. ಇದರಿಂದ ರಾಜ್ಯ ಸರ್ಕಾರಗಳು ರಾಜ್ಯಪಾಲರ ಅಧಿಕಾರವನ್ನೇ ಮೊಟಕುಗೊಳಿಸುವ ಕೆಲಸ ಕೈಗೊಂಡಿದೆ. ಇದುವರೆಗೆ ವಿವಿಗಳ ಆಡಳಿತದಲ್ಲಿ ರಾಜ್ಯ ಸರ್ಕಾರದ ಪಾತ್ರ ಇರಲಿಲ್ಲ. ಈಗ ರಾಜ್ಯಪಾಲರ ಅಧಿಕಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ.
ವರ್ಷಕ್ಕೊಮ್ಮೆ ನಡೆಯುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಪಾವಿತ್ರ್ಯವನ್ನೇ ಗಾಳಿಗೆ ತೂರಲಾಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರು ಓದಲು ನಿರಾಕರಿಸುತ್ತಿದ್ದಾರೆ. ಸಂವಿಧಾನದ ಆಶಯದಂತೆ ರಾಜ್ಯ ಸರ್ಕಾರ ರಾಜ್ಯಪಾಲರ `ಇಚ್ಛೆ’ಯಂತೆ ನಡೆಯಬೇಕು. ಈಗ ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದೆ. ಇದನ್ನು ಸರಿದಾರಿಗೆ ತರಲು ಸುಪ್ರೀಂ ಕೋರ್ಟ್ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡುತ್ತಿಲ್ಲ ಎಂಬುದೇ ರಾಜ್ಯ ಸರ್ಕಾರಗಳ ಪ್ರಮುಖ ಆರೋಪ. ಹಿಂದೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ರಾಜಕೀಯ ಕೂಟದ ಆಡಳಿತ ಇರುತ್ತಿತ್ತು. ಆಗ ರಾಜ್ಯಪಾಲರು ವಿವಾದಕ್ಕೆ ಒಳಗಾಗುತ್ತಿರಲಿಲ್ಲ. ಈಗ ವಿವಿಧ ರಾಜಕೀಯ ಪಕ್ಷಗಳ ಒಕ್ಕೂಟಗಳು ಆಡಳಿತಕ್ಕೆ ಬಂದಿವೆ. ಇದರಿಂದ ಕೇಂದ್ರ-ರಾಜ್ಯಗಳ ನಡುವೆ ತಾಳಮೇಳ ಕಂಡು ಬರುತ್ತಿಲ್ಲ.
ರಾಜ್ಯಪಾಲರು ಹಿಂದೆ ಕೇಂದ್ರ-ರಾಜ್ಯಗಳ ನಡುವೆ ಸ್ನೇಹದ ಕೊಂಡಿಯಾಗಿದ್ದರು. ಈಗ ಭಿನ್ನಾಭಿಪ್ರಾಯಕ್ಕೆ ಈ ಹುದ್ದೆಯೇ ಕಾರಣವಾಗುವ ಹಂತ ತಲುಪಿದೆ.ಹಿಂದೆ ರಾಜಕೀಯ ಮುತ್ಸದ್ಧಿಗಳು ರಾಜ್ಯಪಾಲರಾಗಿ ಮಾರ್ಗದರ್ಶನ ನೀಡುತ್ತಿದ್ದರು. ಈಗ ರಾಜಕಾರಣಿಗಳೇ ರಾಜ್ಯಪಾಲರಾಗುತ್ತಿರುವುದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವುದಕ್ಕೆ ಕಾರಣವಾಗುತ್ತಿದೆ. ನಮ್ಮ ರಾಜ್ಯಪಾಲರಿಗೆ ಡಾ. ರಾಧಾಕೃಷ್ಣನ್, ಡಾ. ಅಬ್ದುಲ್ ಕಲಾಂ ಆದರ್ಶವಾಗಬೇಕು.