ಗದುಗಿನಲ್ಲಿ ಗವಾಯಿಗಳ ಮಹಾ ರಥೋತ್ಸವ

ಗದಗ: ಲಕ್ಷಾಂತರ ಜನರ ಹರ್ಷೋದ್ಘಾರ, ಶ್ರದ್ಧೆ, ಸಂಭ್ರಮಗಳ ಮಧ್ಯೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳ 81ನೇ, ಪದ್ಮಭೂಷಣ ಲಿಂ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಸಂಜೆ ಮಹಾರಥೋತ್ಸವ ಜರುಗಿತು.
ಭಕ್ತರು ಉಭಯ ಗುರುಗಳ ನಾಮಸ್ಮರಣೆ ಮಾಡುತ್ತ ಜಯಘೋಷ ಹಾಕಿದರು. ಜಾತ್ರೆಯೂದ್ಧಕ್ಕೂ ಭಕ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಮೂರುಸಾವಿರಮಠದ ಜ. ಗುರುಸಿದ್ಧ ರಾಜಯೋಗೇಂದ್ರ ಮಹಾಸ್ವಾಮಿಗಳು, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಗಂಗಾವತಿ ಕಲ್ಮಠದ ಡಾ. ಕೊಟ್ಟೂರ ಮಹಾಸ್ವಾಮಿಗಳು, ಉಪ್ಪಿನ ಬೆಟಗೇರಿ ಮೂರುಸಾವಿರಮಠದ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು, ಬಳಗಾನೂರ ಶ್ರೀಮಠದ ಶಿವಶಾಂತವೀರ ಶರಣರು, ಚನ್ನಮ್ಮ ಕಿತ್ತೂರಿನ ಪಂಚಾಕ್ಷರ ಮಹಾಸ್ವಾಮಿಗಳು, ಮುದ್ದೇಬಿಹಾಳದ ಡಾ. ಲಾಲಲಿಂಗೇಶ್ವರ ಶರಣರು, ಅಫಜಲಪೂರಿನ ವಿರುಪಾಕ್ಷಿ ದೇವರು, ಯಡ್ರಾಮಿ ಪ್ರಣವಲಿಂಗ ಮಹಾಸ್ವಾಮಿಗಳು, ಲಿಂಗಸೂರಿನ ಶಿವಶರಣೆ ನಂದೀಶ್ವರಿ ಅಮ್ಮನವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹ ಮಹಾರಥೋತ್ಸವದ ಅದ್ದೂರಿ ಕ್ಷಣಗಳನ್ನು ಕಣ್ತುಂಬಿಕೊಂಡರು.