ಕ್ರೇನ್ ತೊಟ್ಟಿಲಿನಿಂದ ಉರುಳಿಬಿದ್ದು ಓರ್ವ ಸಾವು, ಮತ್ತೊಬ್ಬಾಕೆ ಗಂಭೀರ

ಉಡುಪಿ: ಕ್ರೇನ್ ಸಹಾಯದಿಂದ ಮನೆಯ ಸ್ಲ್ಯಾಬ್ ಸೋರಿಕೆ ಸ್ಥಳ ಪರೀಕ್ಷಿಸಲು ಹೋಗಿದ್ದ ಈರ್ವರು, ಕ್ರೇನಿನ ತೊಟ್ಟಿಲು ವಾಲಿದ ಪರಿಣಾಮ ಈರ್ವರೂ ನೆಲಕ್ಕುರುಳಿದ ದುರ್ಘಟನೆ ಕೋರ್ಟ್ ಹಿಂಭಾಗ ರಸ್ತೆಯ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಶನಿವಾರ ನಡೆದಿದೆ.
ಘಟನೆ ತಿಳಿದು ಧಾವಿಸಿ ಬಂದು ಗಂಭೀರ ಸ್ಥಿತಿಯಲ್ಲಿದ್ದ ಈರ್ವರು ಗಾಯಾಳುಗಳನ್ನು ಒಮ್ಮೆಗೇ ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರು.
ಪರೀಕ್ಷಿಸಿದ ವೈದ್ಯರು ಫ್ರಾನ್ಸಿಸ್ ಪುರ್ಟಾಡೊ (65) ಮೃತಪಟ್ಟಿರುವುದನ್ನು ದೃಢಪಡಿಸಿದರು. ಮೃತರು ಮನೆ ಮಾಲಕರ ಸಹೋದರ ಎಂದು ತಿಳಿದುಬಂದಿದೆ. ಅವರೊಂದಿಗೆ ಕ್ರೇನ್‌ನಲ್ಲಿ ತೆರಳಿದ್ದ ಮನೆ ಕೆಲಸದಾಕೆ ಶಾರದಾ (35) ಗಂಭೀರ ಗಾಯಗೊಂಡಿದ್ದಾರೆ. ಅವರು ಮಲ್ಪೆ ಕಲ್ಮಾಡಿಯವರೆಂದು ಹೇಳಲಾಗಿದೆ.
ಈರ್ವರು ಬಿದ್ದು ನರಳಾಡುತ್ತಿದ್ದರೂ ಕ್ರೇನ್ ಚಾಲಕ ಗಾಯಾಳುಗಳ ರಕ್ಷಣೆಗೆ ಮುಂದೆಬಾರದೇ, ಕ್ರೇನ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.