ತುಮಕೂರು: ಕ್ರಿಪ್ಟೊ ಕರೆನ್ಸಿ ನೀಡುವುದಾಗಿ ನಂಬಿಸಿ ೫.೪೩ ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ನಗರದ ಬಾರ್‌ಲೈನ್ ರಸ್ತೆಯ ಆಮಿನಾ ಫಿರ್ದೋಸ್ ಎಂಬುವರು ವಂಚನೆಗೆ ಒಳಗಾಗಿದ್ದು ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಂಚಕರು ಮೊದಲಿಗೆ ಕೆಕೆ-೧೯೪ ಎಂಬ ವಾಟ್ಸ್ಆಪ್ ಗ್ರೂಪ್‌ಗೆ ಆಮಿನಾ ಫಿರ್ದೋಸ್ ಅವರನ್ನು ಸೇರಿಸಿ ಕ್ರಿಪ್ಟೊ ಕರೆನ್ಸಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ, ಕರೆನ್ಸಿ ಖರೀದಿ ಮಾಡಿದರೆ, ಮುಂದಿನ ದಿನಗಳಲ್ಲಿ ನಾವೇ ಹೆಚ್ಚಿನ ಹಣಕ್ಕೆ ಖರೀದಿಸಿ ದುಪ್ಪಟ್ಟು ಲಾಭ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಅವರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆ ಸಲ್ಲಿಸಿ ಖಾತೆ ತೆರೆದಿದ್ದಾರೆ. ನಂತರ ವಾಟ್ಸ್ಆಪ್ ತಿಳಿಸಿದ ವಿವಿಧ ಖಾತೆಗಳಿಗೆ ೫.೪೩ ಲಕ್ಷ ಹಣ ವರ್ಗಾಯಿಸಿದ್ದಾರೆ. ವಿತ್‌ಡ್ರಾ ಮಾಡುವಾಗ ಇನ್ನೂ ೯.೨೦ ಲಕ್ಷ ವರ್ಗಾಯಿಸಿದರೆ ಮಾತ್ರ ಹಣ ವಾಪಸ್ ಪಡೆಯಬಹುದು ಎಂದು ತೋರಿಸಿದ್ದು ಇದರಿಂದ ಅನುಮಾನ ಬಂದು ಪರಿಶೀಲಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.