ಕ್ಯಾನ್ಸರ್ ಪೀಡಿತ ಮಕ್ಕಳ ವಸತಿ ಶಾಲೆ ತೆರೆಯಲು ಯೋಜನೆ

ಶಿವಮೊಗ್ಗ: ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆಯೊಂದಿಗೆ ಶಿಕ್ಷಣ ಕೊಡುವ ಉದ್ದೇಶದಿಂದ ಕ್ಯಾನ್ಸರ್ ರೆಸಿಡೆನ್ಶಿಯಲ್ ಸ್ಕೂಲ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪ್ರಥಮ ಹಂತವಾಗಿ ರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಪಕ್ಕದಲ್ಲೇ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು, ಇದಕ್ಕಾಗಿ ಎನ್‌ಜಿಓ ನೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಅವರು ಕೂಡ ವರದಿ ನೀಡಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಸಾವಿರಾರು ಮಕ್ಕಳನ್ನು ಗುರುತಿಸಲಾಗಿದ್ದು, 10ನೇ ತರಗತಿವರೆಗಿನ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಈ ಶಾಲೆಯಲ್ಲಿ ಅವಕಾಶವಿರಲಿದೆ. ಪೋಷಕರು ಕೂಡ ಅಲ್ಲಿಯೇ ಇದ್ದು ನೋಡಿಕೊಳ್ಳುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಕಡೆ ಮಾಡಲು ಉದ್ದೇಶಿಸಲಾಗಿದೆ ಎಂದರು. ಕ್ವಾಲಿಟಿ, ಇಕ್ವಾಲಿಟಿ ಹಾಗೂ ಆಕ್ಸೆಸಿಬಿಲಿಟಿಯಲ್ಲಿ ಈ ಶಾಲೆ ನಡೆಲಾಗುತ್ತದೆ. ಇದರಿಂದ ಬಡವರ ಮಕ್ಕಳಿಗೆ ನೆರವಾಗಲಿದೆ. ಆರ್ಥಿಕವಾಗಿಯೂ ಹೊರೆ ತಗ್ಗಿ ಶಿಕ್ಷಣವೂ ಸಿಗಲಿದೆ ಆಟ,ಪಾಠಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲ ಮಕ್ಕಳಂತೆ ಅವರು ಗೌರವಯುತವಾಗಿ ಬದುಕಬೇಕು ಎಂಬುದು ನಮ್ಮ ಉದ್ದೇಶ ಎಂದರು.