ಗದಗ : ಕೌಟುಂಬಿಕ ಕಲಹಕ್ಕೆ ಬೇಸತ್ತು ನವದಂಪತಿ ಒಂದೇ ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗದಗ ತಾಲೂಕ ಹುಲಕೋಟಿ ಗ್ರಾಮದಲ್ಲಿ ಜರುಗಿದೆ.
ವಿಕ್ರಮ ಶಿರಹಟ್ಟಿ (೩೦) ಮತ್ತು ಶಿಲ್ಪಾ ವಿಕ್ರಮ ಶಿರಹಟ್ಟಿ (೨೮) ನೇಣಿಗೆ ಶರಣಾದವರು. ಹುಲಕೋಟಿಯ ಗಣೇಶ ನಗರದಲ್ಲಿ ಆರು ತಿಂಗಳಿನಿಂದ ಈ ದಂಪತಿ ವಾಸಿಸುತ್ತಿದ್ದರು. ಮೂಲತಃ ಗದಗ ತಾಲೂಕ ನಾಗಾವಿ ಗ್ರಾಮದ ವಿಕ್ರಮ ಶಿರಹಟ್ಟಿ ಹುಲಕೋಟಿಯ ಕರ್ನಾಟಕ ಒನ್ ಸೆಂಟರನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಮೃತ ಶಿಲ್ಪಾ ಗೃಹಿಣಿ. ಒಂದು ವಾರದಿಂದ ಮನೆಯಲ್ಲಿ ನಿತ್ಯ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ಜಗಳವನ್ನು ನೆರೆಹೊರೆಯವರು ಅನೇಕ ಸಾರಿ ಬಿಡಿಸಿದ್ದರೂ ಕಲಹ ಮುಂದುವರೆದಿತ್ತೆಂದು ಮೂಲಗಳು ತಿಳಿಸಿವೆ.
ನಿನ್ನೆ ತಡರಾತ್ರಿ ದಂಪತಿ ಮನೆಯಲ್ಲೇ ಸೀರೆಯ ಕುಣಿಕೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗದಗ ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.