ಸಂ.ಕ ಸಮಾಚಾರ, ಕೋಲಾರ: ಕಾಂಗ್ರೆಸ್ ಪಕ್ಷದಲ್ಲಿಯೇ ತಿಕ್ಕಾಟಕ್ಕೆ ಕಾರಣವಾಗಿದ್ದ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆವೈ. ನಂಜೇಗೌಡ ಶನಿವಾರ ಅವಿರೋಧ ಆಯ್ಕೆಯಾಗಿದ್ದಾರೆ.
ಸತತ ಮೂರನೇ ಬಾರಿಗೆ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ನಂಜೇಗೌಡ ತಮ್ಮ ಆಯ್ಕೆ ನಂತರ ಮಾತನಾಡಿ ಒಂದು ವರ್ಷದಲ್ಲಿ ಕೋಲಾರ ಒಕ್ಕೂಟದ ಹಾಲು ಸಂಗ್ರಹಣೆ ಪ್ರಮಾಣವನ್ನು ಈಗಿನ 6 ಲಕ್ಷ ಲೀಟರುಗಳಿಂದ 10 ಲಕ್ಷ ಲೀಟರ್‌ಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.
ಶನಿವಾರ ನಡೆದ ಚುನಾವಣೆ ವೇಳೆ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿ ಕೊಟ್ಟು ಹಿಡಿದಿದ್ದ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ಸಿನ ಮತ್ತೊಬ್ಬ ಸದಸ್ಯ ಮಹಾಲಕ್ಷ್ಮಿ ಪ್ರಸಾದ್ ಬಾಬು ಮತ್ತು ಜೆಡಿಎಸ್‌ನ ನಾಲ್ಕು ಮಂದಿ ನಿರ್ದೇಶಕರು ಗೈರು ಹಾಜರಾಗಿದ್ದರು. ನಂಜೇಗೌಡ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಪ್ರಸಂಗವೇ ಬರಲಿಲ್ಲ.
ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೆ ಬೇಕು-ನಂಜೇಗೌಡ ಪುನರುಚ್ಚಾರ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹೋದರ ಹಾಗೂ ಬೆಂಗಳೂರು ಹಾಲು ಕೂಟದ ಅಧ್ಯಕ್ಷ ಡಿಕೆ ಸುರೇಶ್ ಕಣ್ಣಿಟ್ಟಿರುವ ಕರ್ನಾಟಕ ಹಾಲು ಮಹಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಬಲ ಸ್ಪರ್ಧಿ ಎಂದು ಶಾಸಕ ನಂಜೇಗೌಡ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಹಿಂದೆ ಭೀಮಾ ನಾಯಕ್ ಕೆಎಂಎಫ್ ಅಧ್ಯಕ್ಷರಾದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ನನಗೆ ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನ ದೊರಕಿಸುವುದಾಗಿ ಭರವಸೆ ನೀಡಿದ್ದರು. ಹಾಗಾಗಿ ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನೂ ಪ್ರಬಲ ಸ್ಪರ್ಧೆ ಮತ್ತು ನನಗೇ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ನಂಜೇಗೌಡ ವಿವರಿಸಿದರು.