ಕೊಹ್ಲಿಗೆ ನನ್ನ ಹೆಸರು ಗೊತ್ತು: ಫೋಟೋ ಹಂಚಿಕೊಂಡು ಸಂಭ್ರಮಿಸಿದ ಶ್ರೇಯಾಂಕಾ

ನವದೆಹಲಿ: ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ‘ಅನ್‌ಬಾಕ್ಸ್ ಇವೆಂಟ್’ನ ಸಂದರ್ಭದಲ್ಲಿ ‘ಕಿಂಗ್’ ವಿರಾಟ್ ಕೊಹ್ಲಿ ಅವರನ್ನು ಭೇಟ್ಟಿಯಾಗಿದ್ದರ ಕುರಿತು ೨೦೨೪ರ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲೂಪಿಎಲ್) ವಿಜೇತ ತಂಡದ ಸದಸ್ಯೆ, ಅಪ್ಪಟ ಕನ್ನಡತಿ, ಶ್ರೇಯಾಂಕಾ ಪಾಟೀಲ ಅತೀವ ಸಂತಸ ವ್ಯಕ್ತ ಪಡಿಸಿದ್ದಾರೆ.
ತಮ್ಮ ಚೊಚ್ಚಲ ಡಬ್ಲೂಪಿಎಲ್ ಟ್ರೋಫಿಯನ್ನೆತ್ತಿಕೊಂಡ ಆರ್‌ಸಿಬಿ ಮಹಿಳಾ ತಂಡದ ಸದಸ್ಯೆಯಾಗಿರುವ ಪ್ರಿಯಾಂಕಾ, ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನೊಡನೆ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ತಂಡಕ್ಕೆ ೮ ವಿಕೆಟ್‌ಗಳ ಜಯ ತಂದಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಮರೆಯುವಂತಿಲ್ಲ. ಅವರು ತಮ್ಮ ೩.೩ ಓವರ್‌ಗಳಲ್ಲಿ ಕೇವಲ ೧೨ ಓಟಗಳನ್ನಿತ್ತು ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಅರುಂಧತಿ ರೆಡ್ಡಿ ಹಾಗೂ ತಾನಿಯಾ ಭಾಟಿಯಾರ ವಿಕೆಟ್‌ಗಳನ್ನು ಕಬಳಿಸಿ ಆರ್‌ಸಿಬಿಯ ೧೬ ವರ್ಷಗಳ ‘ಕಪ್ ನಮ್ದೇ’ ಕನಸನ್ನು ನನಸನ್ನಾಗಿಸಿದರು.
ಸಾಮಾಜಿಕ ಜಾಲತಾಣ ‘ಎಕ್ಸ್'(ಈ ಹಿಂದಿನ ಟ್ವೀಟರ್)ನಲ್ಲಿ ವಿರಾಟ್ ಕೊಹ್ಲಿ ಅವರ ಜೊತೆಗಿನ ತಮ್ಮ ಫೋಟೋ ಹಂಚಿಕೊಂಡಿರುವ ಶ್ರೇಯಾಂಕಾ, ‘ಇದು ನನ್ನ ಜೀವನದ ಕ್ಷಣ’ ಎಂದು ಕರೆದುಕೊಂಡಿದ್ದಾರೆ.
“ಅವರಿಗಾಗಿಯೇ ಕ್ರಿಕೆಟ್ ನೋಡಲು ಪ್ರಾರಂಭಿಸಿದೆ. ಅವರಂತೆಯೇ ಆಗುವ ಕನಸಿನೊಂದಿಗೆ ಬೆಳೆದೆ. ಹಾಗೂ ಕಳೆದ ರಾತ್ರಿ ‘ನನ್ನ ಜೀವನದ ಕ್ಷಣ’ ಕಂಡೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಈ ಕನ್ನಡತಿ, “ಹಾಯ್ ಶ್ರೇಯಾಂಕಾ, ಚೆನ್ನಾಗಿ ಬೌಲಿಂಗ್ ಮಾಡಿದೆ. ನಿಜವಾಗಿಯೂ ವಿರಾಟ್‌ಗೆ ನನ್ನ ಹೆಸರೂ ಗೊತ್ತಿದೆ”, ಎಂದಿದ್ದಾರೆ.
ಋತುವಿನುದ್ದಕ್ಕೂ ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ಶ್ರೇಯಾಂಕಾ ಅವರು ‘ಪರ್ಪಲ್(ನೇರಳೆ) ಕ್ಯಾಪ್’ ಗೆದ್ದುಕೊಂಡಿದ್ದಾರೆ. ಎಂಟು ಪಂದ್ಯಗಳಲ್ಲಿ ಎರಡು ಬಾರಿ ೪ ವಿಕೆಟ್‌ಗಳಂತೆ, ೭.೩೦ ‘ಎಕಾನಮಿ ದರ’ದಲ್ಲಿ ಒಟ್ಟು ೧೩ ವಿಕೆಟ್‌ಗಳನ್ನು ಕಿತ್ತಿರುವ ಈ ಆಫ್ ಬ್ರೇಕ್ ಬೌಲರ್ ಈ ಸಲದ ಡಬ್ಲೂಪಿಎಲ್ ಟೂರ್ನಿಯ ‘ಉದಯೋನ್ಮುಖ’ ಆಟಗಾರ್ತಿಯ ಪ್ರಶಸ್ತಿಯನ್ನೂ ಬಾಚಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.