ಕೈಗೆ ಮುದ್ದು; ಬಿಜೆಪಿಯಲ್ಲಿ ಭಿನ್ನಮತದ ಗುದ್ದು

Advertisement

ಸತೀಶ್ ಟಿ.ಎನ್. ತುಮಕೂರು
ಕಲ್ಪತರು ಜಿಲ್ಲೆಯಲ್ಲಿ ಲೋಕಾ ಚುನಾವಣೆ ಕಾವು ಹೆಚ್ಚಾಗುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಟೆಕೆಟ್‌ಗಾಗಿ ಕಸರತ್ತು ಜೋರಾಗಿಯೇ ನಡೆಯುತ್ತಿದೆ.
ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸೋಮಣ್ಣ, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಕಸರತ್ತು ಆರಂಭಿಸಿದ್ದು ದೆಹಲಿ ನಾಯಕರನ್ನು ತಾ ಮುಂದು ನಾ ಮುಂದು ಎನ್ನುವಂತೆ ಭೇಟಿ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿರುವುದರಿಂದ ದಳ ಪಾಳಯದಲ್ಲಿ ಯಾವುದೇ ಪೈಪೋಟಿ ನಡೆಯುತ್ತಿಲ್ಲ. ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಜಿಲ್ಲೆ ಇದೀಗ ಕ್ಷೀಣಿಸುತ್ತಿರುವುದರಿಂದ ಬೇರುಗಳನ್ನಾದರೂ ಹಿಡಿದುಕೊಳ್ಳಲು ವರಿಷ್ಠರು ತಂತ್ರಗಾರಿಕೆ ರೂಪಿಸಿದ್ದಾರೆ.
ಕಳೆದ ಲೋಕಸಭಾ ಕದನದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದಾಗಿ ಮಾಜಿ ಪ್ರಧಾನಿ ದೇವೇಗೌಡ ಕಣಕ್ಕಿಳಿದು ಬಿಜೆಪಿಯ ಬಸವರಾಜು ವಿರುದ್ಧ ಸೋಲು ಅನುಭವಿಸಿದ್ದರು. ಇದೀಗ ಜೆಡಿಎಸ್- ಬಿಜೆಪಿ ಮೈತ್ರಿಯಾಗಿದ್ದು ಕೈ ಸೋಲಿಸಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯದ ಎಸ್‌ಪಿಎಂಗೆ ಟಿಕೆಟ್ ದೊರೆತ್ತಿದ್ದು ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಸೋಮಣ್ಣ ತನಗೇ ಟಿಕಟ್ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ನಮಗೆ ಹೈ ಕಮಾಂಡ್ ಒಲವಿದೆ ಎನ್ನುತ್ತಿದ್ದಾರೆ.

ಪ್ರಚಾರ ಆರಂಭಿಸಿದ ಎಸ್‌ಪಿಎಂ
ನಿರೀಕ್ಷೆಯಂತೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಸೋಮವಾರ ಮಧುಗಿರಿ ತಾಲೂಕಿನ ದೊಡ್ಡವಾಳವಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಇನ್ನು ಅಭ್ಯರ್ಥಿ ಯಾರು ಎಂಬುದೇ ಪ್ರಶ್ನಾರ್ಥಕವಾಗಿದ್ದು ಕಮಲ ಹಿಡಿಯುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಸೋಮಣ್ಣ ಗೋ ಬ್ಯಾಕ್
ಇನ್ನು ಜಿಲ್ಲೆಯಲ್ಲಿ ಮಾಜಿ ಸಚಿವರಿಬ್ಬರ ನಡುವೆ ಟಿಕೆಟ್‌ಗಾಗಿ ಜುಗಲ್ ಬಂಧಿ ಪ್ರಾರಂಭವಾಗಿದೆ. ಇಬ್ಬರೂ ತಮ್ಮದೇ ಆದ ವರ್ಚಸ್ಸು ಹೊಂದಿದ್ದು ತಮ್ಮ ತಮ್ಮ ಬೆಂಬಲಿಗರ ಮೂಲಕ ಹೈ ಕಮಾಂಡ್‌ಗೆ ಒತ್ತಡ ಹಾಕುತ್ತಿದ್ದಾರೆ. ರಾಷ್ಟ್ರ ನಾಯಕರನ್ನು ಭೇಟಿ ಮಾಡುತ್ತಿರುವ ಮಾಜಿ ಸಚಿವ ವಿ.ಸೋಮಣ್ಣಗೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬೆಂಬಲಿಗರು ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗುತ್ತಿದ್ದಾರೆ.

ಕಣಕ್ಕಿಳಿಯಲು ಕಸರತ್ತು
ಹಾಲಿ ಬಿಜೆಪಿ ಸಂಸದ ಬಸವರಾಜು ವಯಸ್ಸಿನ ಕಾರಣದಿಂದಾಗಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದು ತಾನು ಸೋಮಣ್ಣಗೆ ಬೆಂಬಲ ನೀಡುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸೋಮಣ್ಣಗೆ ಟಿಕೆಟ್ ಕೊಡಿಸುವ ಸಲುವಾಗಿ ದೆಹಲಿಯಲ್ಲಿ ರಾಷ್ಟ್ರ ನಾಯಕರನ್ನು ಭೇಟಿ ಮಾಡಿಸಿದ್ದಾರೆ. ಸೋಮಣ್ಣ ಸಹ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಮುನಿಸು ಮರೆತು ಅವರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನುಳಿದಂತೆ ಬಿಜೆಪಿಯಿಂದ ಟಿಕೆಟ್ ಪಡೆದು ಲೋಕಸಭಾ ಕದನಕ್ಕಿಳಿಯಲು ಹಲವರು ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಪರಮೇಶ್, ಸ್ಪೂರ್ತಿ ಚಿದಾನಂದ್, ಹಾಲಿ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಕಸರತ್ತು ಆರಂಭಿಸಿದ್ದಾರೆ.

ಕೈನಲ್ಲಿ ಅಸಮಾಧಾನ
ಟಿಕೆಟ್ ನನಗೆ ಸಿಗುತ್ತದೆ ಎಂದು ಕ್ಷೇತ್ರದಲ್ಲಿ ಓಡಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿದ್ದ ಮುಖಂಡ ಮುರಳಿಧರ ಹಾಲಪ್ಪಗೆ ನಿರಾಸೆಯಾಗಿದ್ದು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ನಿಖಿತ್ ರಾಜ್ ಮೌರ್ಯ, ಕಾಂಗ್ರೆಸ್ ಹಿರಿಯ ಧುರೀಣ ಜಯಚಂದ್ರ ಪುತ್ರ ಸಂಜಯ್ ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಎಸ್‌ಪಿಎಂಗೆ ಟಿಕೆಟ್ ದೊರೆತಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.