ಕೈಗೆ ಬಿ ಫಾರ್ಮ್ ಬರೋತನಕ ಗ್ಯಾರಂಟಿ ಇಲ್ಲ

Advertisement

ವಿಲಾಸ ಜೋಶಿ
ರಾಜಕಾರಣ ನಿಂತ ನೀರಲ್ಲ. ಅಲ್ಲಿ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಸಾಮಾಜಿಕ ಜಾಲತಾಣ ಅಷ್ಟೇ ಅಲ್ಲ ಎಲ್ಲ ಕಡೆಗೆ ಅವರ ಬದಲು ಇವರಿಗೆ ಟಿಕೆಟ್ ಎನ್ನುವ ಅಂತೆ ಕಂತೆ ಮಾತುಗಳು ಕೇಳಿ ಬರುತ್ತಿವೆ. ಆದರೆ ರಾಜಕಾರಣದಲ್ಲಿ ಕೈಗೆ ಬಿ ಫಾರ್ಮ ಬರುವತನಕ ಯಾವುದೂ ಗ್ಯಾರಂಟಿ ಇಲ್ಲ.
ಬಿಜೆಪಿ ಮತ್ತು ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಉಲ್ಲೇಖವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಂತೆಕಂತೆಗಳ ಸುದ್ದಿಗಳು ಹರಿದಾಡುತ್ತಿವೆ.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಆರಂಭದಿಂದ ಕಾಂಗ್ರೆಸ್‌ನಿಂದ ಡಾ.ಗಿರೀಶ ಸೋನವಾಲ್ಕರ ಹೆಸರಿತ್ತು. ಆದರೆ ಕಳೆದ ಮರ‍್ನಾಲ್ಕು ದಿನಗಳಿಂದ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃನಾಲ್ ಹೆಬಾಳಕರ ಹೆಸರು ಮುನ್ನೆಲೆಗೆ ಬಂದಿತು. ಕಳೆದ ಎರಡು ದಿನಗಳಿಂದಂತೂ ಬೆಳಗಾವಿಗೆ ಮೃನಾಲ್ ಹೆಸರು ಅಂತಿಮವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ಚಿಕ್ಕೋಡಿಗೆ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹೆಸರು ಕೇಳಿಬರುತ್ತಿದೆ.
ಆದರೆ ಇಬ್ಬರೂ ಸಚಿವರು ಇದರ ಬಗ್ಗೆ ತುಟಿಪಿಟಕ್ಕೆಂದಿಲ್ಲ. ಸತೀಶ ಜಾರಕಿಹೊಳಿಯವರು ಮಾತ್ರ ತಮ್ಮ ಪುತ್ರಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಸಚಿವೆ ಹೆಬ್ಬಾಳಕರ ಅವರು ಕಾರ್ಯಕರ್ತರ ಒತ್ತಡವಿದೆ ಎನ್ನುವ ಮಾತು ಆಡುವ ಮೂಲಕ ಪುತ್ರನ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟಂತಿದೆ. ಹೀಗಾಗಿ ಸತೀಶ್ ಜಾರಕಿಹೊಳಿ ಲೆಕ್ಕಾಚಾರ ಇಲ್ಲಿ ತಿರುವು ಮುರುವು ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಕಳೆದ ಬಾರಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಡಾ.ಗಿರೀಶ ಸೋನವಾಲ್ಕರ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕೇ ಬಿಟ್ಟಿತು ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದಿದ್ದವು. ಆದರೆ ಕೊನೆ ಗಳಿಗೆಯಲ್ಲಿ ಕೈತಪ್ಪಿತು. ಇಲ್ಲಿ ಗಿರೀಶ ಸೋನವಾಲ್ಕರ ಅವರು ಎಲ್ಲ ಪಕ್ಷದವರಿಗೂ ಮತ್ತು ಎಲ್ಲ ವರ್ಗಕ್ಕೂ ಬೇಕಾದ ವ್ಯಕ್ತಿತ್ವ ಹೊಂದಿದವರು. ಹೀಗಾಗಿ ಅವರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಪ್ರಯತ್ನ ನಡೆಸಿದ್ದರು. ಆರಂಭದ ದಿನಗಳಲ್ಲಿ ಅವರೊಂದಿಗೆ ಸತೀಶ್ ಎರಡ್ಮೂರು ಸಭೆ ನಡೆಸಿದ್ದರು. ಅವರ ಸೂಚನೆ ಮೇರೆಗೆ ಡಾ.ಸೋನವಾಲ್ಕರ ಅವರು ಅಖಾಡಾದಲ್ಲಿ ಧುಮುಕಿದ್ದರು. ಈಗಲೂ ಕೂಡ ಸತೀಶ ಅವರು ತಯಾರಿಯಲ್ಲಿ ಇರುವಂತೆ ಮತ್ತು ಕ್ಷೇತ್ರದಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.
ಬಿಜೆಪಿಯಲ್ಲಿ ನಿಲ್ಲದ ಗೊಂದಲ: ಕಾಂಗ್ರೆಸ್‌ನಲ್ಲಿ ಒಂದು ರೀತಿಯಾದರೆ ಬಿಜೆಪಿಯಲ್ಲಿ ಅಭ್ಯರ್ಥಿಗಳ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಇತ್ತೀಚೆಗೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಬೆಳಗಾವಿಗೆ ಬಂದು ಹೋದರೂ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಆದರೆ ಜಿಲ್ಲಾ ಕಮಿಟಿಯಿಂದ ಎರಡೂ ಕ್ಷೇತ್ರದಿಂದ ತಲಾ ಮೂರು ಹೆಸರನ್ನು ಶಿಫಾರಸು ಮಾಡಲಾಗಿದೆ ಎನ್ನುವುದು ಗೊತ್ತಾಯಿತು. ಆದರೆ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಬಿಜೆಪಿಯಲ್ಲಿ ಕೊನೆಗಳಿಗೆಯಲ್ಲಿ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿದರೆ ಆಶ್ಚರ್ಯಪಡಬೇಕಿಲ್ಲ.
ಬೆಳಗಾವಿ ಕ್ಷೇತ್ರದಿಂದ ಮಹಾಂತೇಶ ಕವಟಗಿಮಠ, ಅನಿಲ ಬೆನಕೆ ಮತ್ತು ಸಂಜಯ ಪಾಟೀಲರ ಹೆಸರು ಶಿಫಾರಸ್ಸಾಗಿದೆ. ಇದರ ಜೊತೆಗೆ ಜಗದೀಶ ಶೆಟ್ಟರ ಹೆಸರೂ ಪ್ರಸ್ತಾಪವಾಗತೊಡಗಿದೆ. ಚಿಕ್ಕೋಡಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅಮಿತ್ ಕೋರೆ ಹೆಸರು ಶಿಫಾರಸ್ಸಾಗಿದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.