ಬೀದರ್: ಜನಿವಾರ ಧರಿಸಿದ ಕಾರಣ ಓರ್ವ ಬ್ರಾಹ್ಮಣ ವಿದ್ಯಾರ್ಥಿಗೆ ಕೆ-ಸಿಇಟಿ ಬರೆಯಲು ಅವಕಾಶ ನೀಡದೆ ವಾಪಸು ಕಳುಹಿಸಿದ ಘಟನೆ ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಮನ್ಹಳ್ಳಿ ರಸ್ತೆಯಲ್ಲಿರುವ ಸಾಯಿ ಸ್ಫೂರ್ತಿ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕೆ-ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಈ ಪ್ರಸಂಗ ನಡೆದಿದೆ. ಸುಚಿವೃತ ಕುಲಕರ್ಣಿ ಎಂಬ ವಿದ್ಯಾರ್ಥಿಗೆ ಪೊಲೀಸರು ಮತ್ತು ಇಲಾಖೆ ಸಿಬ್ಬಂದಿ ತಪಾಸಣೆ ಮಾಡುವ ಸಂದರ್ಭದಲ್ಲಿ ಜನಿವಾರ ಧರಿಸಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ. ಜನಿವಾರದಲ್ಲಿ ಕ್ಯಾಮೆರಾ ಇದ್ದಿರಬಹುದು ಎಂಬಂಥ ಅಸಂಬದ್ಧ ವಿಷಯ ಪ್ರಸ್ತಾಪಿಸಿ ಜನಿವಾರ ತೆಗೆದು ಬಾ ಎಂದು ಹೀಯಾಳಿಸಿದ್ದಾರೆ. ಜನಿವಾರ ತೆಗೆಯುವುದಿಲ್ಲ ಎಂದು ವಿದ್ಯಾರ್ಥಿ ಪಟ್ಟು ಹಿಡಿದ. ಜನಿವಾರ ತೆಗೆಯಬೇಕು ಎಂಬ ಯಾವ ನಿಯಮವಿಲ್ಲ ಎಂದು ಹೇಳಿದ ಸುಚಿವೃತ ಕುಲಕರ್ಣಿ ಜೊತೆ ಅಸಭ್ಯದಿಂದ ವರ್ತಿಸಿದ ಸಿಬ್ಬಂದಿ ಈತನಿಗೆ ನಿಂದಿಸಿ ವಾಪಸು ಕಳುಹಿಸಿದ್ದಾರೆ. ಇದರಿಂದಾಗಿ ಗಣಿತ ವಿಷಯದ ಪರೀಕ್ಷೆ ಬರೆಯಲಾಗದೇ ವಿದ್ಯಾರ್ಥಿ ಕಣ್ಣೀರಿಟ್ಟು ಮಮ್ಮಲಮರಗಿದ.
ಕಾರಣ ಕೇಳಿ ನೊಟೀಸ್ ಜಾರಿ
ಈ ಘಟನೆಗೆ ಸಂಬಂಧಿಸಿದಂತೆ ಸಾಯಿ ಸ್ಫೂರ್ತಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ಬಿರಾದಾರ್ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್ ಶೋಕಾಸ್ ನೊಟೀಸ್ ಜಾರಿ ಮಾಡಿದ್ದಾರೆ. ನೊಟೀಸ್‌ಗೆ ಉತ್ತರ ಬಂದ ಬಳಿಕ ಮುಂದಿನ ಕ್ರಮಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆಯಲಿದೆ ಎಂದು ಇಲಾಖೆಯಲ್ಲಿನ ಉನ್ನತ ಮೂಲಗಳು ತಿಳಿಸಿವೆ.
ಸ್ವಯಂ ಪ್ರೇರಿತ ದೂರು ದಾಖಲು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಶುಕ್ರವಾರ ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಮನೆಗೆ ಭೇಟ ನೀಡಿ ಧೈರ್ಯ ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಕೊಂಡಿದೆ ಎಂದು ಕೋಸಂಬೆ ತಿಳಿಸಿದ್ದಾರೆ.