ಎಸ್‌ಎಸ್‌ಎಲ್‌ಸಿ ಪಾಸಾ ಗಲು ನಾಲ್ಕು ವರ್ಷ ತೆಗೆದು ಕೊಂಡು ಆಮೇಲೆ ಪಿಯುಸಿ ಮೊದಲನೇ ವರ್ಷ ಅದ್ಹೇಗೋ ಪಾಸಾಗಿ ಎರಡನೇ ವರ್ಷದಲ್ಲಿ ಪ್ರತಿವರ್ಷ ಪರೀಕ್ಷೆ ಕಟ್ಟುತ್ತಿದ್ದರೂ ಪಾಸಾಗದೇ ಕೊನೆಗೆ ಊರು ಸೇರಿದ್ದ ತಿಗಡೇಸಿಗೆ ಪಿಯುಸಿ ಎರಡನೇ ವರ್ಷದ ಮೇಲೆ ಭಯಂಕರ ಸಿಟ್ಟಾಗಿದ್ದ. ಆ ಹೆಸರೇ ನನ್ನ ಮುಂದೆ ಎತ್ತಬೇಡಿ ಎಂದು ಹೇಳುತ್ತಿದ್ದ. ಏನಾದರೂ ಕೆಲಸ ಮಾಡು, ದುಡಿ ಎಂದು ಅವರ ಅಪ್ಪ ಅಮ್ಮ ದಿನಾಲೂ ಬಯ್ಯುತ್ತಿದ್ದರೆ ತಿಗಡೇಸಿಯು ನೀವು ಚಿಂತೆ ಮಾಡಬೇಡಿ ನಾನು ಸರ್ಕಾರಿ ನೌಕರಿ ಹಿಡಿಯುತ್ತೇನೆ ಎಂದು ಶಪಥ ಮಾಡಿದಂತೆ ಹೇಳುತ್ತಿದ್ದ. ಆಗಲೇ ಆತನಿಗೆ ಪೊಲೀಸ್ ಆಗಬೇಕು ಎಂಬ ಆಸೆ ಚಿಗುರೊಡೆಯಿತು. ಅವರ ಪೇರೆಂಟ್ಸ್‌ಗೂ ಈ ವಿಷಯ ತಿಳಿಸಿದ. ಅವರ ಅಪ್ಪ ಅವರಿವರ ಕೈಕಾಲು ಹಿಡಿದು ಲೋಕಲ್ ಎಂಎಲ್‌ಎ ಮನೆಗೆ ಎಡತಾಕಿ, ಹೇಗಾದರೂ ಮಾಡಿ ನನ್ನ ಮಗನಿಗೆ ಪೊಲೀಸ್ ನೌಕರಿ ಕೊಡಿಸಿ ಎಂದು ವಿನಂತಿಸುತ್ತಿದ್ದ. ರಿಟನ್ ಟೆಸ್ಟ್ ಅದ್ಹೇಗೋ ಬರೆದು ಪಾಸಾದ. ಮೊದಲೇ ಅವರಪ್ಪ ಎಲ್ಲರಿಗೂ ಏನು ಕೊಡುವುದು ಕೊಟ್ಟು ಹೇಳಿ ಇಟ್ಟಿದ್ದರಿಂದ ಆ ನೌಕರಿಯೂ ಆತನಿಗೆ ಸಿಕ್ಕಿತು. ಊರ ತುಂಬ ಸಿಹಿ ಹಂಚಿದ ತಿಗಡೇಸಿ ನಾಡಿದ್ದು ನಾನು ಜಾಯ್ನ್ ಆಗುತ್ತೇನೆ ಎಂದು ಹೇಳಿ ಕೆಲಸಕ್ಕೆ ಹಾಜರಾದ. ಆತ ಹಾಜರಾದ ದಿನವೇ ಎರಡನೇ ಪಿಯುಸಿ ಫಲಿತಾಂಶ ಇತ್ತು. ಇತ್ತೀಚಿಗೆ ರಿಸಲ್ಟ್‌ನಲ್ಲಿ ಫೇಲಾದರೆ ಹುಡುಗರು ಕೆರೆಗೆ ಹಾರುತ್ತಿದ್ದರು. ಇದು ಅವರಿಗೆ ರೂಢಿ ಆದಂತೆ ಇತ್ತು. ಆ ದಿನ ಇನ್ಸಪೆಕ್ಟರ್ ತಿಗಡೇಸಿಯನ್ನು ಕರೆದು…. ಏಯ್ ತಿಗಡೇಸಿ ನೀನು ಇವತ್ತು ಕೆರೆದಂಡೆ ಡ್ಯೂಟಿ ಮಾಡು.. ಯಾರಾದರೂ ಪಿಯುಸಿ ಹುಡುಗರು ಹಾರಲು ಬರುತ್ತಾರೆ ಅವರನ್ನು ಕೆರೆಗೆ ಹಾರಲು ಬಿಡಬೇಡ ಎಂದು ಹೇಳಿದ್ದರು. ತಿಗಡೇಸಿ ಕೆರೆಯ ದಂಡೆಯಲ್ಲಿರುವ ಗಿಡದ ಕೆಳಗೆ ಕುರ್ಚಿ ಹಾಕಿಕೊಂಡು ಕುಳಿತ. ಯಾವ ಹುಡುಗರೂ ಬರಲಿಲ್ಲ. ಯಾರೂ ಬರುವುದಿಲ್ಲ ಬಿಡು ಎಂದು ಅಂದುಕೊಂಡ ತಿಗಡೇಸಿ ಮನೆಗೆ ಹೋಗಲು ಸಜ್ಜಾಗುತ್ತಿದ್ದ. ಅಷ್ಟರಲ್ಲಿ ಒಂದು ಹುಡುಗ ಓಡೋಡಿ ಬರುವುದು ಕಾಣಿಸಿತು. ಇವನ್ಯಾರಿವ ಎಂದು ಅನ್ನುವಷ್ಟರಲ್ಲಿ ಆ ಹುಡುಗ ತಿಗಡೇಸಿ ಹತ್ತಿರ ಬಂದಿದ್ದ. ಅವನನ್ನು ನಿಲ್ಲಿಸಿ ಯಾರು ನೀನು ಇಲ್ಲಿಗೇಕೆ ಬಂದೆ ಅಂದ. ಅದಕ್ಕೆ ಆ ಹುಡುಗ ತನ್ನ ಹೆಸರು ಹೇಳಿ ನಾನು ಕೆರೆಗೆ ಹಾರಲು ಬಂದಿದ್ದೇನೆ ಎಂದು ಹೇಳಿದ. ನೀನೇನು ಕಲಿಯುತ್ತಿ ಎಂದು ಕೇಳಿದಾಗ ಆ ಹುಡುಗ ಎಸ್‌ಎಸ್‌ಎಲ್‌ಸಿ ಅಂದ. ಓಹೋ ಹಾಗಾ… ನಮ್ಮ ಸಾಹೇಬರು ಪಿಯುಸಿ ಹುಡುಗರನ್ನು ಹಾರಲು ಬಿಡಬೇಡ ಅಂದಿದ್ದಾರೆ. ನೀನು ಎಸ್‌ಎಸ್‌ಎಲ್‌ಸಿ ಅಂದ ಮೇಲೆ ಕೆರೆಗೆ ಹಾರಿಕೋ ಹೋಗು ಎಂದು ಅಲ್ಲಿಂದ ಮನೆಗೆ ಬಂದ ತಿಗಡೇಸಿ.