ಕೆಆರ್‌ಎಸ್ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದವರ ಬಂಧನ

ಶ್ರೀರಂಗಪಟ್ಟಣ: ತಾಲೂಕಿನ ಕೆ.ಆರ್.ಎಸ್ ಕನ್ನಂಬಾಡಿ ಅಣೆಕಟ್ಟೆಯ ನಿಷೇಧಿತ ಪ್ರದೇಶದ ಒಳಗಿಳಿದು ಸೆಲ್ಫಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟದ್ದ ಯುವಕರಿಬ್ಬರು ಇದೀಗ ಪೊಲೀಸರು ಅತಿಥಿಯಾಗಿದ್ದಾರೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ಜೀವನ್ ಹಾಗೂ ಗಂಗಾಧರ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರಿಗೆ ಶೋಧ ಕಾರ್ಯ ನಡೆಸಿದ್ದಾರೆ.
ಇತ್ತೀಚೆಗೆ ನಾಲ್ಕು ಮಂದಿ ಅಕ್ರಮವಾಗಿ ನಿರ್ಬಂಧಿತ ಪ್ರದೇಶವಾದ ಕೆಆರ್‌ಎಸ್ ಅಣೆಕಟ್ಟೆ ಒಳಗಿಳಿದು ಸೆಲ್ಫಿ ವಿಡಿಯೋ ಮಾಡಿ, ನಮ್ಮನ್ನು ಒಳಗೆ ಬಿಟ್ಟಿಲ್ಲ, ಆದರೂ ಕೂಡ ನಾವು ಬಂದಿದ್ದೇವೆ. ನೀರು ಸುಂಡು ಹೋಗಿದೆ, ಎಷ್ಟು ವಿಶಾಲವಾದ ಜಾಗವಿದೆ, ಅಣೆಕಟ್ಟೆ ಬರಿದಾಗಿದೆ. ಈ ವೇಳೆ ನೀರು ಬಿಟ್ಟರೆ ನಾವು ತೇಲಿಕೊಂಡು ಶಿವನ ಪಾದಕ್ಕೆ ಹೋಗುತ್ತೇವೆ ಎಂಬ ಸಂಭಾಷಣೆಗಳನ್ನು ನಡೆಸಿದ್ದಾರೆ.
ಜೊತೆಗೆ ಇಲ್ಲಿರುವವರು ಮೂರ್ತಿ, ಇನ್ನೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಇಲ್ಲಿದ್ದ ಇಬ್ಬರನ್ನು ತನ್ನ ಮೊಬೈಲ್‌ನಲ್ಲಿ ತೋರಿಸುವ ಮೂಲಕ ಇಷ್ಟವಾದರೆ ಕಾಮೆಂಟ್ ಮಾಡಿ ಫ್ರೆಂಡ್ಸ್ ಎಂದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದರು.
ಮಾಧ್ಯಮಗಳು ಕೆಆರ್‌ಎಸ್‌ನ ಭದ್ರತಾ ಪಡೆಯ ಕಾರ್ಯವೈಖರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಲ್ಲದೆ ಸುದ್ದಿ ಪ್ರಕಟಿಸಿ ಇಲ್ಲಿನ ಭದ್ರತೆ ಬಗ್ಗೆ ಪ್ರಶ್ನಿಸಿದ್ದವು. ಎಚ್ಚೆತ್ತ ಕೆಆರ್‌ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ, ಮತ್ತಿಬ್ಬರ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ.