ಕೃಷ್ಣಾ ಅಧಿಸೂಚನೆ-ರಾಜ್ಯದ ಆಗ್ರಹಕ್ಕೆ ಕೇಂದ್ರ ಸಚಿವರ ಸಕಾರಾತ್ಮಕ ಸ್ಪಂದನ

ಕಲಬುರಗಿ: ಕೃಷ್ಣಾ ನೀರಿನ ಕುರಿತ ಬಚಾವತ್ ಐತೀರ್ಪಿಗೆ ಕೇಂದ್ರ ಕೂಡಲೇ ಅಧಿಸೂಚನೆ ಜಾರಿಗೊಳಿಸಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಒತ್ತಾಯಕ್ಕೆ, ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಶನಿವಾರ ನೀಡಿದರು.
ಸಂಯುಕ್ತ ಕರ್ನಾಟಕ' ಪತ್ರಿಕೆಯ ಬೆಳ್ಳಿಹಬ್ಬಕಲ್ಯಾಣ ಸಿರಿ’ಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ಈ ಇಬ್ಬರೂ ಗಣ್ಯರು ಪಕ್ಷಬೇಧ ಮರೆತು ಅಧಿಸೂಚನೆಗೆ ಒಟ್ಟಾಗಿ ಯತ್ನಿಸುವ ಸಂಕಲ್ಪವನ್ನು ಮಾಡಿದರು.
ರಾಜ್ಯ ಹಿತಕ್ಕೆ ಸಂಬಂಧಿಸಿದ ಈ ವಿಷಯವನ್ನು ಮುಖ್ಯ ಅತಿಥಿಯಾಗಿದ್ದ ಸಚಿವ ಪಾಟೀಲ್ ಪತ್ರಿಕೆಯ ವೇದಿಕೆಯಲ್ಲಿ ಪ್ರಸ್ತಾಪಿಸಿ, ಅವರ ನಂತರ ಭಾಷಣ ಇನ್ನೋರ್ವ ಮುಖ್ಯ ಅತಿಥಿ ಕೇಂದ್ರ ಸಚಿವ ಜೋಶಿ ಪ್ರತಿಕ್ರಿಯೆ ನೀಡಲು ಕಲ್ಯಾಣ ಸಿರಿ' ವೇದಿಕೆ ಕಲ್ಪಿಸಿದ್ದು ವಿಶೇಷ. ಏಕೆಂದರೆ ಸಿದ್ದರಾಮಯ್ಯ ಸರ್ಕಾರ ಕಳೆದ ಹಲವಾರು ತಿಂಗಳುಗಳಿಂದ ಅಧಿಸೂಚನೆಗೆ ಒತ್ತಾಯಿಸುತ್ತಲೇ ಇತ್ತು. ಜೊತೆಗೆ, ಈ ಸಂಬಂಧ ಚರ್ಚಿಸಲು ಮೇ ಮೊದಲ ವಾರ ದೆಹಲಿಯಲ್ಲಿ ಉನ್ನತ ಸಭೆಯನ್ನೂ ಕರೆದಿತ್ತು. ಆದರೆ ಆಪರೇಷನ್ ಸಿಂದೂರ್ ಅದೇ ಸಂದರ್ಭದಲ್ಲಿ ನಡೆದು ಆ ಸಭೆ ಮುಂದೆ ಹೋಗಿತ್ತು. ಈ ವಿದ್ಯಮಾನದ ನಂತರ ನಡೆದ ಮೊದಲ ವೈಚಾರಿಕ ಸ್ತರದ ಕಾರ್ಯಕ್ರಮವಾಗಿತ್ತು ಪತ್ರಿಕೆಯ ಬೆಳ್ಳಿಹಬ್ಬ. ಹೀಗಾಗಿ ಈ ಇಬ್ಬರ ಮಾತುಗಳಿಗೆ ಈಗ ಮಹತ್ವ ಬಂದಿದೆ. ಬಚಾವತ್ ಐತೀರ್ಪು ಪ್ರಕಟವಾಗಿ ಹದಿನೈದು ವರ್ಷಗಳಾಗಿವೆ. ಈಗಾಗಲೇ ಐತೀರ್ಪಿನ ಅವಧಿಯ ಶೇ ೪೦ರಷ್ಟು ಸಮಯ ಮುಗಿದು ಹೋಗಿದೆ. ೨೦೬೦ಕ್ಕೆ ಅವಧಿ ಮುಗಿಯಲಿದೆ. ಅಧಿಸೂಚನೆ ಜಾರಿಯಾಗದೇ ಯುಕೆಪಿ ಕೆಲಸಗಳು ಉಳಿದಿವೆ. ಕೂಡಲೇ ಅಧಿಸೂಚನೆ ಜಾರಿಗೊಳಿಸದೇ ಇದ್ದರೆ ರಾಜ್ಯಕ್ಕೆ, ವಿಶೇಷವಾಗಿ ಉತ್ತರ ಮತ್ತು ಕಲ್ಯಾಣ ಪ್ರಾಂತ್ಯಕ್ಕೆ ದೊಡ್ಡ ಅನ್ಯಾಯವಾಗಲಿದೆ. ಕೇಂದ್ರ ಸಚಿವ ಜೋಶಿ ಈ ಕೆಲಸವನ್ನು ಮಾಡಿಸಿಕೊಡಬೇಕು’ ಎಂದು ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದರು.
ತಮ್ಮ ಭಾಷಣದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅಧಿಸೂಚನೆಗೆ ತಮ್ಮ ಪಕ್ಷದ ಅಡ್ಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
`ಇದು ರಾಜ್ಯ ಹಿತದ ಪ್ರಶ್ನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ನೀವು ಎಲ್ಲರೂ ಸೇರಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೊಂದಿಗೆ ದೆಹಲಿಯಲ್ಲಿ ವಿಶೇಷ ಸಭೆ ನಡೆಸಿ. ನಂತರ ನಾವೆಲ್ಲ ಸೇರಿ ಪ್ರಧಾನಿ ಬಳಿ ನಿಯೋಗ ಹೋಗಿ ಅಧಿಸೂಚನೆಗೆ ಯತ್ನಿಸೋಣ. ಸದ್ಯ ವಿಷಯ ಸುಪ್ರೀಂ ಕೋರ್ಟಿನಲ್ಲಿ ಇರುವುದರಿಂದ ಇದಕ್ಕೆ ಹಿನ್ನಡೆಯಾಗಿದೆ. ಪ್ರಧಾನಿ ಬಳಿ ತೆರಳಿ ಪರಿಹಾರ ಕಂಡುಕೊಳ್ಳೋಣ’ ಎಂದು ಜೋಶಿ ಎಚ್.ಕೆ. ಪಾಟೀಲರಿಗೆ ಕೋರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಇಬ್ಬರೂ ಜವಾಬ್ದಾರಿಯುತ ಸಚಿವರು ಪತ್ರಿಕೆಯ ವೇದಿಕೆಯಲ್ಲಿ ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆಗಳು) ಕುರಿತು ಒಮ್ಮತದ ಮಾತನಾಡಿದ್ದು ಸಭಿಕರಿಂದ ಚಪ್ಪಾಳೆ ಗಿಟ್ಟಿಸಿತು.