ಗದಗ : ಜಿಲ್ಲೆಯಲ್ಲಿ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸಿರುವ ನೂರಾರು ಕ್ವಿಂಟಲ್ ಹೆಸರು ಬೀಜಗಳು ಹುಳು ಹತ್ತಿದ್ದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು ರೈತರು ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಖಾಸಗಿ ಅಂಗಡಿಯಲ್ಲಿ ಬೀಜ ಖರೀದಿಸಿದಲ್ಲಿ ಕಳಪೆ ಬೀಜ ವಿತರಣೆಯಾಗುವ ಭಯದ ಹಿನ್ನೆಲೆಯಲ್ಲಿ ಬಹುತೇಕ ರೈತರು ಸರಕಾರಿ ಸ್ವಾಮ್ಯದ ರೈತ ಸಂಪರ್ಕ ಕೇಂದ್ರದಿAದ ಖರೀದಿಸುತ್ತಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಸಿದಲ್ಲಿ ರೈತರಿಗೆ ರಿಯಾಯತಿ ದರದೊಂದಿಗೆ ಗುಣಮಟ್ಟದ ಖಾತ್ರಿಯೂ ಇರುತ್ತದೆ.
ಗದಗ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಿಸಿದ ನೂರಾರು ಪಾಕೀಟ್ ಹೆಸರು ಬೀಜಗಳು ಕಳಪೆಯಾಗಿವೆ. ಹೆಸರು ಬೀಜಗಳನ್ನು ಹುಳುಗಳು ತಿಂದಿದ್ದರಿಂದ ಈ ಬೀಜಗಳನ್ನು ಬಿತ್ತನೆ ಮಾಡಿದರೂ ಯಾವದೇ ಬೆಳೆ ಬರುವ ಖಾತ್ರಿಯಿಲ್ಲ.
ಒಂದು ಎಕರೆ ಹೆಸರು ಬಿತ್ತನೆ ಮಾಡಲು ಕನಿಷ್ಟ ೩೫ ರಿಂರ ೪೦ ಸಾವಿರ ರೂಪಾಯಿ ಖರ್ಚಾಗುತ್ತದೆ. ಕಳೆದ ಎರಡು ವರ್ಷಗಳಿಂದ ಬರಗಾಲದ ಹಿನ್ನೆಲೆಯಲ್ಲಿ ಬಹುತೇಕ ರೈತರು ದಲಾಲಿ ಅಂಗಡಿ,ಖಾಸಗಿ ಫೈನಾನ್ಸಗಳಲ್ಲಿ ಸಾಲ ಮಾಡಿಯೇ ಹಣ ಹೊಂದಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರವೇ ಕಳಪೆ ಬೀಜ ವಿತರಣೆ ಮಾಡಿ ರೈತರ ಜೀವ ಹಿಂಡಿದರೇ ಹೇಗೆ? ಎಂಬುದು ರೈತರ ಆತಂಕವಾಗಿದೆ.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಿರುವ ಕಳಪೆ ಬೀಜಗಳ ಬಗ್ಗೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೆಎ ರಾಜ್ಯ ಬೀಜ ನಿಗಮ ಪ್ರಮಾಣೀಕರಿಸಿದ ನಂತರವೇ ವಿತರಣೆ ಮಾಡಲಾಗಿದೆಯೆಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಜಿಲ್ಲೆಯ ಉಳಿದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹ ಇದೇ ರೀತಿಯ ಕಳಪೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆಯೆಂದು ರೈತರು ಆರೋಪಿಸಿದ್ದಾರೆ.