ಬಾಗಲಕೋಟೆ(ಕುಳಗೇರಿ ಕ್ರಾಸ್): ಕುಳಗೇರಿ ನೂತನ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಈಗ ರೋಗ ಹರಡುವ ತಾಣವಾಗಿದೆ. ನಿತ್ಯ ಬಂದು ಹೋಗುವ ಪ್ರಯಾಣಿಕರು ದುರ್ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ.
ಇಲ್ಲಿನ ಶೌಚಾಲಯದ ಸೇಪ್ಟಿ ಟ್ಯಾಂಕ್ ನಿಲ್ದಾಣದ ತುಂಬೆಲ್ಲ ಹರಿಯುತ್ತಿದೆ. ಅಷ್ಟೇ ಏಕೆ ರಾಷ್ಟ್ರೀಯ ಹೆದ್ದಾರಿ ಮೇಲೆಯೂ ಹರಿಯುತ್ತಿದ್ದು ಸದ್ಯ ಗ್ರಾಮದ ಬಡಾವಣೆಗಳಿಗೂ ನುಗ್ಗಿದೆ. ಇದರಿಂದ ಗ್ರಾಮ ಸಂಪೂರ್ಣ ದುರ್ವಾಸನೆ ಬೀರುತ್ತಿದ್ದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಈ ದುರ್ಗಂಧಕ್ಕೆ ಸೇಪ್ಟಿ ಟ್ಯಾಂಕ್ ಕಾರಣವಾಗಿದ್ದು ಅದನ್ನು ಸರಿಪಡಿಸದ ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ:
ಶೌಚಾಲಯದ ನೀರು ಎಲ್ಲೆಂದರಲ್ಲಿ ಹರಿಯುತ್ತಿರುವ ಬಗ್ಗೆ ಈ ಮೊದಲಿನಿಂದಲೂ ಗ್ರಾಮಸ್ಥರು, ಪ್ರಯಾಣಿಕರು ಸಾರಿಗೆ ನಿಯಂತ್ರಣಾಧಿಕಾರಿಗೆ ತಿಳಿಸುತ್ತಿದ್ದಾರೆ. ಮೇಲಧಿಕಾರಿಗಳಿಗೂ ಸಾಕಷ್ಟು ಮನವಿ ಮಾಡಿದ್ದಾರೆ. ಸದ್ಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ನಿಲ್ದಾಣದಲ್ಲೇ ಬಸ್ ನಿಲ್ಲಿಸಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
10 ರೂ. ವಸೂಲಿ
ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ಮಹಿಳೆಯರಿಂದ 10 ರೂ. ವಸೂಲಿ ಮಾಡಲಾಗುತ್ತಿದೆ. ಕೆಲ ಮಹಿಳೆಯರು ಸುಮ್ಮನೆ ದುಡ್ಡು ಕೊಟ್ಟು ಹೋಗುತ್ತಾರೆ ಇನ್ನೂ ಕೆಲವರು ಇದನ್ನ ಪ್ರಶ್ನಿಸುತ್ತಾರೆ. ಯಾಕಪ್ಪ ಇಷ್ಟು ಅಂತ ಕೇಳಿದರೆ ಧಮಕಿ ಹಾಕುವ ಲೇವಲ್‌ಗೆ ಮಾತನಾಡುತ್ತಾನೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆದಾಯ ನೋಡುವ ಅಧಿಕಾರಿಗಳು:
ಈ ಬಸ್ ನಿಲ್ದಾಣ ನಿರ್ಮಿಸಿ ಸುಮಾರು ವರ್ಷಗಳೇ ಕಳೆದವು. ಲಕ್ಷ.. ಲಕ್ಷ.. ರೂ. ಆದಾಯ ನಿರೀಕ್ಷೆ ಇಟ್ಟುಕೊಂಡು ಬಸ್ ನಿಲ್ದಾಣದಲ್ಲಿನ ಹೋಟೆಲ್, ಪಾನ್‌ಶಾಪ್, ಶೌಚಾಲಯ ನಿರ್ವಹಣೆ ಸೇರಿದಂತೆ ವಿವಿಧ ಮಳಿಗೆಗಳಿಗೆ ಟೆಂಡರ್ ಕರೆಯುತ್ತಾರೆ. ಸ್ವಚ್ಛತೆಗೆ ಆದ್ಯತೆ ನೀಡದ ಅಧಿಕಾರಿಗಳು ನಿಲ್ದಾಣವನ್ನು ಆದಾಯಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ.
ನಿಲ್ದಾಣದ ಅಂಗಡಿಗಳು ಗ್ರಾಮದಲ್ಲಿನ ಮಳಿಗೆಗಳಿಗಿಂತ ಅತಿ ಹೆಚ್ಚು ಬಾಡಿಗೆ ಹೊಂದಿವೆ. ಟೆಂಡರ್ ಆಹ್ವಾನಿಸಿ ಲಾಭ ಪಡೆಯುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರಿಗೆ ಮೂಲ ಸೌಲಭ್ಯ ಒದಗಿಸುತ್ತಿಲ್ಲ. ಇನ್ನಾದರೂ ಸಾರಿಗೆ ಅಧಿಕಾರಿಗಳು ಕಣ್ತೆರೆದು ನೋಡುವರೆ ಕಾಯ್ದು ನೋಡಬೇಕಿದೆ.