ಸುಳ್ಳು ಹೇಳುವುದರಲ್ಲಿ ಗಿನ್ನೀಸ್ ರೆಕಾರ್ಡ್ ಮಾಡಲು ಹೊರಟಿದ್ದ ಕುಲ್ಡೇಸಿ ಈಗ ಸಿಗೆಬಿದ್ದಿದ್ದಾನೆ. ಆತ ಹೇಳುವುದೇ ಸುಳ್ಳು. ಅದು ಸುಳ್ಳು ಎಂದು ಯಾವುದೇ ಕಾರಣಕ್ಕೆ ಅನಿಸುತ್ತಿರಲಿಲ್ಲ. ಸುಳ್ಳು ಹೇಳದೇ ಹೋದರೆ ಆತನಿಗೆ ಅವತ್ತು ಊಟವೇ ಸೇರುತ್ತಿರಲಿಲ್ಲ. ಪಕ್ಕದ ವಿರುಪಾಪುರಕ್ಕೆ ಹೋಗಿದ್ದ ಕುಲ್ಡೇಸಿ ಅಲ್ಲೇ ವಸ್ತಿ ಇದ್ದು ಮರುದಿನ ಊರಿಗೆ ಬಂದಾಗ ಯಾಕೆ ಕಾಣಲೇ ಇಲ್ಲ ಎಂದು ಕೇಳಿದರೆ ವಿಯಟ್ನಾಂಗೆ ಹೋಗಿದ್ದೆ ಅಲ್ಲಿ ವಿಲಿಯಮ್ ಮನೆಯಲ್ಲಿ ಊಟ ಮಾಡಿಕೊಂಡು ಬಂದೆ ಎಂದು ಹೇಳಿದ್ದ. ಹಾಗೆ ಕೇಳಿದವರಿಗೆ ವಿಯಟ್ನಾಂನೂ ಗೊತ್ತಿರಲಿಲ್ಲ. ವಿಲಿಯಮ್ಸೂ ಪರಿಚಯವಿರಲಿಲ್ಲ ಹಾಗಾಗಿ ಹಾಳಾಗಿ ಹೋಗಲಿ ಎಂದು ಸುಮ್ಮನಾಗುತ್ತಿದ್ದರು. ಅದೊಂದು ದಿನ ಕುಲ್ಡೇಸಿ ಲಾದುಂಚಿಗೆ ಹೋಗಿದ್ದ. ಅಲ್ಲಿ ಹೋಟ್ಲೆಂಕ್ಟಿ ಹೋಟೆಲ್‌ನಲ್ಲಿ ತಿಂಡಿ ತಿಂದು ಬಂದಿದ್ದನಂತೆ. ಮರುದಿನ ಶೇಷಮ್ಮನ ಹೋಟೆಲ್‌ನಲ್ಲಿ ಕುಳಿತು… ಅಯ್ಯೋ ಇದ್ಯಾವ ಹೋಟೆಲ್ಲು? ಹೋಟ್ಲೆಂಕ್ಟಿ ಹೋಟೆಲ್ ಮುಂದೆ ಯಾವ ಹೋಟೆಲ್ಲೂ ಇಲ್ಲ. ಅದೆಷ್ಟು ರುಚಿ ಮಾಡುತ್ತಾರೆ ಏನ್ಕತೆ.. ಈ ಚಹ ನೋಡಿ ತೊಗರಿ ಕಟ್ಟಿಗೆ ವಾಸನೆ ಎಂದು ಹೀಯಾಳಿಸುತ್ತಿದ್ದ. ಅದನ್ನು ಗಮನಿಸಿದ ಶೇಷಮ್ಮ ಇವನಿಗೆ ಪಾಠ ಕಲಿಸಬೇಕು ಎಂದು ಲೆಕ್ಕ ಹಾಕಿದಳು. ಅವತ್ತು ಕನಕಾಪುರಕ್ಕೆ ಹೋಗಿದ್ದ ಕುಲ್ಡೇಸಿ ಕಜಕಿಸ್ತಾನಕ್ಕೆ ಹೋಗಿದ್ದೆ ಎಂದು ಎಲ್ಲರ ಮುಂದೆ ಹೇಳಿದ್ದ. ಕಜಕಿಸ್ತಾನದಲ್ಲಿ ಬಂಗಾರದ ಅಂಗಡಿ ಕಳುವಾಗಿದ್ದ ಸುದ್ದಿ ಪೇಪರ್‌ಗಳಲ್ಲಿ ಬಂದಿತ್ತು. ಅದನ್ನು ಓದಿ ತಿಳಿದುಕೊಂಡಿದ್ದಳು. ಶೇಷಮ್ಮನ ಅಂಗಡಿಗೆ ಬರುತ್ತಿದ್ದ ಪೊಲೀಸರಿಗೆ ಈ ವಿಷಯ ತಿಳಿಸಿದಳು.
ಇದರಲ್ಲಿ ಕುಲ್ಡೇಸಿ ಕೈವಾಡ ಇದೆ ಎಂದು ಹೇಳಿದಳು. ಆತ ಕಜಕಿಸ್ತಾನಕ್ಕೆ ಹೋಗಿದ್ದ ಎಂದು ನೀವು ಹೇಗೆ ಹೇಳುತ್ತೀರಿ ಎಂದು ಪೊಲೀಸರು ಪ್ರಶ್ನೆ ಮಾಡಿದರು. ಸ್ವಲ್ಪ ತಡೆಯಿರಿ ಎಂದು ತನ್ನ ಮೊಬೈಲ್‌ನಿಂದ ಕುಲ್ಡೇಸಿಗೆ ಕಾಲ್ ಮಾಡಿ ಸ್ಪೀಕರ್ ಆನ್ ಮಾಡಿದಳು.
ಆ ಕಡೆಯಿಂದ ಕುಲ್ಡೇಸಿ ಹೇಳ್ ಶೇಷಮ್ಮ ಅಂದ. ನೀನು ಮೊನ್ನೆ ಎಲ್ಲಿಗೆ ಹೋಗಿದ್ದೆ ಅಂದಾಗ ಅಯ್ಯೋ ಅದು ಕಜಕಿಸ್ತಾನ ಅಂದ. ಫೋನ್ ಕಟ್ ಮಾಡಿ ನೋಡಿದ್ರಾ ಸಾರ್ ಎಂದು ಶೇಷಮ್ಮ ಅಂದದ್ದೇ ತಡ ಪೊಲೀಸರು ಕುಲ್ಡೇಸಿ ಮನೆಯ ಕಡೆಗೆ ಓಡಿದರು.