ಕುಡಿದ ಮತ್ತಿನಲ್ಲಿ ದೇವಾಲಯಕ್ಕೆ ಕಲ್ಲು

ಬೆಳಗಾವಿ: ಕುಡಿದ ಮತ್ತಿನಲ್ಲಿ ಅನ್ಯಕೋಮಿನ ಯುವಕನೊಬ್ಬ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ ನಡೆದಿದೆ.
ಇಲ್ಲಿನ ಅಶ್ವತ್ಥಾಮ ದೇವಸ್ಥಾನದ ಮೇಲೆ ಯುವಕ ಕಲ್ಲು ತೂರಾಟ ನಡೆಸಿದ್ದಾನೆ. ದೇವಸ್ಥಾನದ ಮೇಲೆ ಕಲ್ಲು ತೂರುತ್ತಿದ್ದಂತೆ ಸ್ಥಳೀಯರು ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ಕೆಲವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯಾಕೆ ಕಲ್ಲು ತೂರಾಟ ನಡೆಸುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಕ್ಕೆ ಈ ಹಿಂದೆ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ್ದ. ಅದಕ್ಕೆ ಕೋಪದಿಂದ ಕಲ್ಲು ಬೀಸಾಡಿದ್ದೇನೆ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.
ಯುವಕನನ್ನು ಉಜ್ವಲ ನಗರದ ಯಾಸಿರ್ ಎಂದು ಗುರುತಿಸಲಾಗಿದ್ದು ಈತ ಮಾನಸಿಕ ಅಸ್ವಸ್ಥನಾಗಿದ್ದು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಹೇಳಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.