ಕಿವಿಹಿಂಡಿ ಸರಿ ಮಾಡುವ `ಸಂಯುಕ್ತ ಕರ್ನಾಟಕ’

ಕಲಬುರಗಿ:ಸಂಯುಕ್ತ ಕರ್ನಾಟಕ' ಪತ್ರಿಕೆಯೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಂಟು ವಿಶಿಷ್ಟವಾದುದು. ಪತ್ರಿಕೆಯ ಬರಹಗಳು ಮತ್ತು ಸಂಪಾದಕೀಯಗಳನ್ನು ತಂದೆಯವರು ಮತ್ತು ನಾನು ಇಬ್ಬರೂ ತುಂಬ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಶನಿವಾರ ಹೇಳಿದರು. ಸಂಯುಕ್ತ ಕರ್ನಾಟಕ’ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿದ್ದ ಅವರು ಪತ್ರಿಕೆಯ ಮೌಲ್ಯ ಮತ್ತು ಅಕ್ಷರ ಕ್ರಾಂತಿಯಿಂದ ಸಮಾಜದಲ್ಲಿ ಅದು ಮಾಡುತ್ತಿರುವ ಪರಿವರ್ತನೆಗಳೇ ನಮ್ಮಂತೆ ಸಾಮಾಜಿಕ ಕ್ಷೇತ್ರದಲ್ಲಿರುವ ಎಲ್ಲರೂ ಎಚ್ಚರಿಕೆಯಿಂದ ಇರಲು ಸಾಧ್ಯವಾಗಿದೆ' ಎಂದರು. ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಹಾರನಹಳ್ಳಿ ರಾಮಸ್ವಾಮಿ ಅವರನ್ನು ತಂದೆಯವರು (ಬಿಎಸ್‌ವೈ) ಪ್ರತಿ ಕ್ಲಿಷ್ಟ ಘಟ್ಟದಲ್ಲಿಯೂ ಸಂಪರ್ಕಿಸಿ, ಚರ್ಚಿಸಿ ಮುಂದುವರಿಯುತ್ತಿದ್ದುದು ಇನ್ನೂ ನೆನಪಿದೆ ಎಂದು ಮೆಲಕು ಹಾಕಿದರು. ತಾವೂ ಕೂಡ ಪತ್ರಿಕೆಯ ಅಭಿಮಾನಿ ಎಂದರು. ಸಂಯುಕ್ತ ಕರ್ನಾಟಕದ ವರದಿಗಳು ನಾಡಿನ ಹಿತಕ್ಕೆ ಪೂರಕವಾಗಿರುತ್ತವೆ. ಇಂದು ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳಾಗಿ ವಾಣಿಜ್ಯೀಕರಣ ವ್ಯಾಪಿಸಿದ್ದರೂ, ಪತ್ರಿಕೆ ಮಾತ್ರ ತನ್ನ ಮೌಲ್ಯಗಳೊಂದಿಗೆ ರಾಜೀ ಮಾಡಿಕೊಂಡಿಲ್ಲ. ರಾಜ್ಯ ಮತ್ತು ರಾಷ್ಟ್ರ ಹಿತದ ತತ್ವಗಳನ್ನು ಬಿಟ್ಟುಕೊಟ್ಟಿಲ್ಲ. ಸಂಪಾದಕೀಯದ ಮೂಲಕ ಇಂದಿಗೂ ಜನಪ್ರತಿನಿಧಿಗಳಿಗೆ ಕಿವಿ ಹಿಂಡಿ ಕೆಲಸ ಮಾಡಿಸುತ್ತಿದೆ’ ಎಂದು ವಿಜಯೇಂದ್ರ ಬಣ್ಣಿಸಿದರು.