ಬೆಳಗಾವಿ: ಬಸ್‌ನ ಕಿಟಕಿ ಸೀಟಿಗಾಗಿ ಕಿತ್ತಾಡಿಕೊಂಡ ಅಪರಿಚಿತ ಯುವಕರು, ಕಾಲೇಜು ವಿದ್ಯಾರ್ಥಿಗೆ ಹರಿತವಾದ ಆಯುಧದಿಂದ ಇರಿದ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ನ ಕಿಟಕಿ ಸೀಟಿಗಾಗಿ ಕಾಲೇಜು ವಿದ್ಯಾರ್ಥಿಯೊಂದಿಗೆ ಈ ಯುವಕರು ಜಗಳಕ್ಕಿಳಿದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ವಿದ್ಯಾರ್ಥಿಯ ಎದೆಗೆ ಹರಿತವಾದ ಆಯುಧದಿಂದ ಇರಿದು ಪರಾರಿಯಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಮಾಜ್ ಸನದಿ(19) ಬೆಳಗಾವಿ ತಾಲೂಕಿನ ಪಂತ ಬಾಳೇಕುಂದ್ರಿ ಗ್ರಾಮದವನಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆಗೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈಗಾಗಲೇ ಬಸ್ ಪತ್ತೆಯಾಗಿದ್ದು, ಅಪರಿಚಿತರನ್ನು ಪತ್ತೆ ಮಾಡಲು 3 ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗಲಾಟೆಯಲ್ಲಿ ಗಾಯಗೊಂಡ ವಿದ್ಯಾರ್ಥಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಇಮ್ರಾನ್ ಪೀರಜಾದೆ ಹೇಳಿದರು. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.