ಕಾಶ್ಮೀರದಲ್ಲಿ ನರಮೇಧ: ಮೈಸೂರಿನ ಒಂದೇ ಕುಟುಂಬದ 10 ಜನ ಸುರಕ್ಷಿತ

ಮೈಸೂರು: ಜಮ್ಮು, ಕಾಶ್ಮೀರದಲ್ಲಿ ನರಮೇಧ ನಡೆದ ಸ್ವಲ್ಪ ದೂರದಲ್ಲಿದ್ದ ಮೈಸೂರಿನ ಒಂದೇ ಕುಟಂಬದ ಹತ್ತು ಮಂದಿ ಸುರಕ್ಷಿತವಾಗಿದ್ದಾರೆ. ಇವರೆಲ್ಲರೂ ಆತಂಕಗೊಂಡಿದ್ದು ಮೈಸೂರಿಗೆ ಬರುವ ತವಕದಲ್ಲಿದ್ದಾರೆ.
ಉಗ್ರರು ದಾಳಿ ನಡೆಸಿ ೨೬ ಮಂದಿಯನ್ನು ಹತ್ಯೆ ಮಾಡಿದ ಸ್ಥಳದಿಂದ ದೂರದಲ್ಲಿದ್ದ ಇವರಿಗೆ ಯಾವುದೇ ಅಪಾಯವಾಗಿಲ್ಲ. ದೆಹಲಿ ಹಾಗೂ ಕಾಶ್ಮೀರ ಪ್ರವಾಸ ಕೈಗೊಂಡಿದ್ದ ನಗರದ ಕೇಂದ್ರ ಅಂಚೆ ಕಚೇರಿಯ ಸೂಪರ್ ವೈಸರ್ ವಿಲೀಶ್, ಸುನೀತಾ ಹಾಗೂ ಕುಟುಂಬಸ್ಥರಾದ ಜೆ. ಪ್ರಸಾದ್, ಆಶಾ, ಲಕ್ಷ್ಮಿ ಹಾಗೂ ಮಕ್ಕಳು ಸೇರಿ 10 ಮಂದಿ ಅಲ್ಲಿ ಅತಂತ್ರ ಪರಿಸ್ಥಿತಿಗೆ ಸಿಲುಕಿದ್ದರು.
8 ದಿನದ ಪ್ರವಾಸ ಮುಗಿಸಿ ಕಾಶ್ಮೀರದ ಟ್ರೆಡೆಂಟ್ ಹೋಟೆಲ್‌ನಲ್ಲಿ ತಂಗಿದ್ದರು. ಈ ಹೋಟೆಲ್‌ನಿಂದ ಸ್ವಲ್ಪ ದೂರದಲ್ಲಿ ಗುಂಡಿನ ಮೊರೆತದಿಂದ ಭಯಗೊಂಡ ಇವರುಗಳು ಅಲ್ಲಿಂದ ಈಚೆಗೆ ಬಂದಿಲ್ಲ. ನಂತರ ವಿಷಯ ತಿಳಿದ ಮೇಲೆ ಭಯಭೀತರಾಗಿದ್ದಾರೆ. ಏ. 28ಕ್ಕೆ ಬರಬೇಕಿದ್ದ ಇವರು ಕಾಶ್ಮೀರಿ ಘಟನೆ ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಿ ಮೈಸೂರಿಗೆ ಬರಲು ನಿರ್ಧರಿಸಿದ್ದಾರೆ. ಈಗಾಗಲೇ ರಾಜ್ಯದ ಮೇಲಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಇವರನ್ನು ಅಲ್ಲಿನ ಸಚಿವರು ಖುದ್ದು ಭೇಟಿ ನೀಡಿ ರಾಜ್ಯಕ್ಕೆ ಇಂದು ಸಂಜೆ ಅಥವಾ ನಾಳೆ ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ.
ಘಟನೆ ಬಳಿಕ ಅಲ್ಲಿ ಉಂಟಾಗಿರುವ ಪರಿಸ್ಥಿತಿ ಕುರಿತು ಮಾಹಿತಿ ನೀಡಿರುವ ಕುಟುಂಬದ ಸದಸ್ಯರು, ಸದ್ಯ ಇಲ್ಲಿ ಅಂಗಡಿ ಮುಗ್ಗಟ್ಟುಗಳೆಲ್ಲವೂ ಬಂದ್ ಆಗಿದ್ದು, ನಾವು ಹೋಟೆಲ್ ಒಳಗೆ ಇದ್ದೇವೆ. ಸಚಿವರು ಕಳುಹಿಸಿ ಕೊಡುವ ಭರವಸೆ ನೀಡಿದ್ದು ಸದ್ಯಕ್ಕೆ ನಾವಿರುವ ಜಾಗದಲ್ಲಿ ಯಾವುದೇ ಅಪಾಯ ಆಗಿಲ್ಲ ಎಂದು ತಿಳಿಸಿದ್ದಾರೆ.
ಉಗ್ರರ ದಾಳಿಯ ಬೆಚ್ಚಿ ಬೀಳಿಸುವ ಘಟನೆ ಬಳಿಕ ರಾಜ್ಯದ ಜನರ ಸುರಕ್ಷಿತ ವಾಪಸಾತಿಗಾಗಿ ವ್ಯವಸ್ಥೆ ಮಾಡಲು ಅಲ್ಲಿಗೆ ಭೇಟಿ ನೀಡಿರುವ ಸಚಿವ ಸಂತೋಷ್ ಲಾಡ್, ಇವರಿಗೆ ಧೈರ್ಯ ತುಂಬಿದ್ದಲ್ಲದೆ, ರಾಜ್ಯಕ್ಕೆ ವಾಪಸಾಗಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.