ಕಾವೇರಿ ಆರತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ

ಬೆಂಗಳೂರು: ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಆಯೋಜಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ರೈತ ನಾಯಕಿ, ಮಂಡ್ಯ ಜಿಲ್ಲೆಯ ಸುನಂದಾ ಜಯರಾಮ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ್‌ರಾವ್ ಹಾಗೂ ನ್ಯಾಯಮೂರ್ತಿ ಸಿ. ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ ವಾದ ಮಂಡಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್. ಎಂ ವಿಶ್ವೇಶ್ವರಯ್ಯ ಸೇರಿ ೧೯೦೮ ರಲ್ಲಿ ಕೆಆರ್‌ಎಸ್ ಜಲಾಶಯ ಕಟ್ಟಿದ್ದಾರೆ. ಶತಮಾನದ ಇತಿಹಾಸ ಹೊಂದಿರುವ ಈ ಜಲಾಶಯ ರಾಷ್ಟ್ರೀಯ ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿದೆ. ಇದೀಗ ಸರ್ಕಾರ ಈ ಜಲಾಶಯದ ಬಳಿ ಕಾವೇರಿ ಆರತಿ ಎಂಬ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇದಕ್ಕಾಗಿ ೧೦೦ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಜಲಾಶಯದ ೪೦ ಮೀಟರ್ ಅಂತರದಲ್ಲಿ ೨೦ ರಿಂದ ೨೫ ಸಾವಿರ ಜನರಿಗೆ ಆಗುವಷ್ಟು ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಚಾರಣೆ ನಡೆಸಿದ್ದಾರೆ.