ಕಾಳಿ ತೀರದ ಗ್ರಾಮಗಳಲ್ಲಿ ಮೊಸಳೆಗಳ ಭಯ

ದಾಂಡೇಲಿ: ದಾಂಡೇಲಿಯ ಕಾಳಿ ನದಿ ತೀರದಲ್ಲೀಗ ಮೊಸಳೆಗಳ ಭಯ ಹೆಚ್ಚಾಗಿದೆ. ಅಳಿವಿನಂಚಿನಲ್ಲಿರುವ ಮಾರ್ಷ ಮಗ್ಗರ್ ಜಾತಿಗೆ ಸೇರಿದ ಮೊಸಳೆಗಳಿವು. ಮೊಸಳೆಗಳ ರಕ್ಷಣೆಗಾಗಿ ಇಲ್ಲೊಂದು ಮೊಸಳೆ ಪಾರ್ಕ್ ಕೂಡ ಸರ್ಕಾರ ನಿರ್ಮಿಸಿದೆ.

ಆದರೆ ಈ ಮೊಸಳೆ ಪಾರ್ಕ್ ಗಿಂತ ಹೆಚ್ಚಿನ ಮೊಸಳೆಗಳು ನದಿ ತೀರದಲ್ಲಿ ಎಲ್ಲೆಡೆ ಕಂಡು ಬರುತ್ತಿದೆ. ಕಳೆದೊಂದು ವಾರದಿಂದ ಸುರಿದ ಆರಿದ್ರಾ ಮಳೆ, ಗಾಳಿಯಿಂದಾಗಿ ತಾಲೂಕಿನ ಬೊಮ್ಮನಳ್ಳಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ. ನದಿ ತೀರದಲ್ಲಿ ನೂರಾರು ಸಂಖ್ಯೆಯಲ್ಲಿ ಮೊಸಳೆಗಳು ಮೊಟ್ಟೆ ಇಡಲು ಸುರಕ್ಷಿತ ಸ್ಥಳ ಹುಡುಕಿ ಕಾಳಿದಡದತ್ತ ಸಾಗುತ್ತಿದೆ. ಇವು ನಗರದ ಜನ ವಸತಿ ಪ್ರದೇಶಗಳಾದ ಪಟೇಲನಗರ, ಹಳೇ ದಾಂಡೇಲಿ, ಕೋಗಿಲಬನ, ಸಾಕ್ಷಾಳಿ,ಬೊಮ್ಮನಳ್ಳಿ ಮತ್ತಿತರೇ ಗ್ರಾಮದ ಬಂಡೆಗಲ್ಲುಗಳ ಮೇಲೆ, ಹುಲ್ಲುಗಿಡಗಂಟಿ ನಡುವೆ ಹಾಗೂ ಜನವಸತಿ ಇರುವ ಗ್ರಾಮಗಳಲ್ಲಿ ಸಂಚರಿಸುತ್ತಿರುವುದು, ಬಿಸಿಲಿಗೆ ಮೈಯೊಡ್ಡಿ ಮಲಗಿರುವುದನ್ನು ಕಾಣಬಹುದು. ಕಾಳಿ ನದಿ ದಂಡೆಯ ನಗರದ ಜನವಸತಿ ಇರುವ ಪ್ರದೇಶದಲ್ಲಿ ಅರಣ್ಯಇಲಾಖೆ ಹಲವೆಡೆ ಕಬ್ಬಿಣದ ಜಾಲಿ ಬೇಲಿಗಳನ್ನು ಅಳವಡಿಸಿದೆ. ಆದರೂ ಮೊಸಳೆಗಳು ಗ್ರಾಮೀಣ ಹಾಗೂ ಜನವಸತಿ ಪ್ರದೇಶಗಳತ್ತ ಸಂಚರಿಸುತ್ತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ದಾಂಡೇಲಿ ಕಾಳಿ ನದಿ ಸೇತುವೆಯ ಮೇಲೆ ನಿಂತು ನೋಡಿದರೆ ಬೃಹದಾಕಾರದ ಮೊಸಳೆಗಳು ಬಂಡೆಗಳ ಮೇಲೆ ಹುಲ್ಲು ಹಾಸಿನ ಮೇಲೆ ಕಾಣುತ್ತದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಿದ್ದು, ಅವು ದಂಡೆಗೆ ಬಂದು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿರುವುದರಿಂದ ಆತಂಕ ಸೃಷ್ಠಿಯಾಗಿದೆ.