ಶಿವಮೊಗ್ಗ : ಕ್ರಿಕೆಟ್ ಕಾಲ್ತುಳಿತದಲ್ಲಿ ೧೧ ಯುವಜನರ ಸಾವಿಗೆ ಕಾರಣವಾದ ರಾಜ್ಯ ಸರ್ಕಾರದ ವಿರುದ್ಧ ಜೂನ್ ೧೩ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂನ್ ೪ರಂದು ಕರ್ನಾಟಕದ ಇತಿಹಾಸದಲ್ಲಿಯೇ ಕರಾಳ ದಿನವಾಗಿದೆ. ಆರ್‌ಸಿಬಿ ಗೆದ್ದ ಸಂಭ್ರಮದಲ್ಲಿ ತೆಗೆದುಕೊಂಡಿರುವ ಸರ್ಕಾರದ ಬೇಜವಾಬ್ದಾರಿ ನಿರ್ಧಾರ ೧೧ ಜನರ ಸಾವಿಗೆ ಕಾರಣವಾಯಿತು. ಇದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬೇಜವಾಬ್ದಾರಿ ಮತ್ತು ಪುಕ್ಕಟೆ ಪ್ರಚಾರಕ್ಕಾಗಿ ತೆಗೆದುಕೊಂಡ ಹುಚ್ಚುತನದ ನಿರ್ಧಾರವಾಗಿದೆ ಎಂದರು.
ಗ್ಯಾರೆಂಟಿಗಳ ಜನಪ್ರಿಯತೆಯೇ ಕಾಂಗ್ರೆಸ್ ಸರ್ಕಾರಕ್ಕೆ ಸಾಕಿತ್ತು. ಆದರೆ ದುರಾಸೆಯಿಂದ ಮತ್ತಷ್ಟು ಜನಪ್ರಿಯತೆ ಗಳಿಸುವ ಉದ್ದೇಶ, ಸಿಎಂ ಮತ್ತು ಡಿಸಿಎಂಗಳ ನಡುವಿನ ಹಠ, ಚಟಗಳ ಪೈಪೋಟಿಯಿಂದಾಗಿ ಈ ದುರ್ಘಟನೆ ನಡೆದಿದೆ. ಮುಖ್ಯಮಂತ್ರಿಗಳು ಹೇಳುವುದೇ ಬೇರೆ. ಉಪಮುಖ್ಯಮಂತ್ರಿ ಮಾಡಿದ್ದೇ ಬೇರೆ. ವಿಮಾನ ನಿಲ್ದಾಣಕ್ಕೆ ಡಿ.ಕೆ. ಶಿವಕುಮಾರ್ ಹೋಗಿ ಆರ್‌ಸಿಬಿ ಗೆದ್ದ ಕಪ್‌ನ್ನು ತಾವೇ ಗೆದ್ದಿದ್ದು ಎಂದು ಭ್ರಮಿಸಿ ಕಿತ್ತುಕೊಳ್ಳುವುದನ್ನು ನೋಡಿದರೆ ಇವರ ಹುಚ್ಚುತನಕ್ಕೆ ಮತ್ತು ಹಪಾಹಪಿಗೆ ಏನು ಹೇಳುಬೇಕೋ ಅರ್ಥವಾಗುವುದಿಲ್ಲ.
ಪೊಲೀಸರು ಕಾರ್ಯಕ್ರಮಕ್ಕೆ ನಿರಾಕರಿಸಿದರೂ ಕೂಡ ಶಾಂತಿ ಕಾಪಾಡುವುದು ಕಷ್ಟ ಎಂದರೂ ಕೂಡ ಡಿ.ಕೆ. ಶಿವಕುಮಾರ್‌ರವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಆಚರಣೆಗೆ ಒಪ್ಪಿಗೆ ಕೊಟ್ಟಿದ್ದು ಮತ್ತು ಅದರಲ್ಲಿ ಭಾಗವಹಿಸಿದ್ದು ತಪ್ಪು. ಘಟನೆ ನಡೆದಿದ್ದರೂ ಕೂಡ ಮುಖ್ಯಮಂತ್ರಿಗಳು ಇದು ವಿಧಾನಸೌಧದ ಮೆಟ್ಟಿಲಲ್ಲಿ ಆಗಿಲ್ಲ ಮತ್ತು ಸರ್ಕಾರದ ತಪ್ಪಿಲ್ಲ ಎಂದು ಹೇಳುತ್ತಿರುವುದನ್ನು ನೋಡಿದರೆ, ಇವರೆಂತಹ ದುರ್ಬಲ ಮುಖ್ಯಮಂತ್ರಿ ಎಂದು ಅರ್ಥವಾಗುತ್ತದೆ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದ್ದು, ಅನ್ಯಾಯವಾಗಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಘೋರ ಅಪರಾಧವಾಗಿದೆ ಎಂದರು.
ಇಡೀ ಪ್ರಕರಣವನ್ನು ತನಿಖೆಗೆ ಆಗ್ರಹ ಮಾಡಿರುವುದು ಸರಿಯಷ್ಟೇ. ಆದರೆ ನಿವೃತ್ತ ನ್ಯಾಯಮೂರ್ತಿಗಳಿಂದ ಈ ತನಿಖೆ ನಡೆಸಿದರೆ ಅರ್ಥಬರುವುದಿಲ್ಲ. ಹಾಗಾಗಿ ಇದನ್ನು ಹಾಲಿ ಉಚ್ಛ ನ್ಯಾಯಾಲಯದಿಂದ ತನಿಖೆ ನಡೆಸಬೇಕು. ಇನ್ಯಾವುದೇ ತನಿಖೆಗಳಿಂದ ನ್ಯಾಯ ಹೊರಬರುವುದಿಲ್ಲ ಎಂದರು