ಮೂಡಿಗೆರೆ: ತಾಲೂಕಿನ ತರುವೆ ಗ್ರಾಪಂ ವ್ಯಾಪ್ತಿಯ ದೇವನಗೂಲ್ ಗ್ರಾಮಕ್ಕೆ ನಸುಕಿನಲ್ಲಿ ದಾಳಿ ನಡೆಸಿರುವ ಕಾಡಾನೆ, ಬೆಳೆ ಹಾನಿ ಮಾಡಿದೆ. ಗ್ರಾಮದ ಆಚಾರ್ ಪಾಲ್ ಪ್ರದೇಶದ ಕಾಫಿ ತೋಟಗಳಿಗೆ ನುಗ್ಗಿ, ಬಾಳೆ, ಕಾಫಿ, ಕಾಳುಮೆಣಸು ಬೆಳೆಗಳನ್ನು ಹಾನಿಗೊಳಿಸಿದೆ.
ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಕಾಡಾನೆಯನ್ನು ಅರಣ್ಯಕ್ಕೆ ಓಡಿಸುವ ಯತ್ನ ನಡೆಸಿದ್ದು, ಬೆಳೆಹಾನಿಯನ್ನು ಪರಿಶೀಲಿಸಿದರು. ತರುವೆ, ತ್ರಿಪುರ, ಬಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆ ಹಾಗೂ ಎರಡು ಕಾಡಾನೆಗಳ ಗುಂಪು ನಿತ್ಯ ಸಂಚರಿಸುತ್ತಿದ್ದು, ಬೆಳೆಹಾನಿ ಮಾಡುತ್ತಿವೆ.
ಇನ್ನೇನು ಗದ್ದೆ ನಾಟಿ ಪ್ರಾರಂಭವಾಗಲಿದ್ದು, ಇನ್ನಷ್ಟು ಬೆಳೆ ಹಾನಿಯಾಗುವ ಆತಂಕ ಕಾಡುತ್ತಿದೆ. ರಾತ್ರಿಯಾಗುತ್ತಿದ್ದಂತೆ ಮನೆ ಬಾಗಿಲಿಗೆ ಬಂದು ಕಾಡಾನೆಗಳು ಗೀಳಿಡುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಕಾಡಾನೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.