ಕಾಂತಾರ-1 ಶೂಟಿಂಗ್‌ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ: ಸ್ಪಷ್ಟನೆ

ಶಿವಮೊಗ್ಗ: ಕಾಂತಾರ-1 ಸಿನಿಮಾ ಶೂಟಿಂಗ್‌ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್‌ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಚಿತ್ರೀಕರಣಕ್ಕಾಗಿ ಶಿಪ್‌ ಸೆಟ್‌ ನಿರ್ಮಾಣ ಮಾಡಿದ್ದೆವು. ಗಾಳಿ-ಮಳೆಯಿಂದ ಸೆಟ್‌ ಮುಗುಚಿ ಹೋಗಿದೆ ಹೊರತು ಕಲಾವಿದರಿಗೆ ಏನೂ ಆಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಸೆಟ್ ಹಾಕಿದ ಸ್ಥಳದಿಂದ ನಾವು ತುಂಬಾ ದೂರದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಯಾರಿಗೂ-ಯಾವುದೇ ಅನಾಹುತವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದು ಇಂದು ಭಾನುವಾರವೂ ಸಹ ಚಿತ್ರೀಕರಣ ನಡೆಸಿದ್ದೇವೆ. ಅಲ್ಲದೇ ನಮ್ಮ ಕ್ಯಾಮೆರಾ ಮತ್ತು ಇತರೆ ಯಾವುದೇ ವಸ್ತುಗಳಿಗೂ ಕೂಡ ಹಾನಿಯಾಗಿಲ್ಲ. ಜಲಾಶಯ ಪಕ್ಕದಲ್ಲಿ ಯಾವುದೇ ಚಿತ್ರಿಕರಣ ಮಾಡಿಲ್ಲ ಎಂದು ತಿಳಿಸಿದರು.