‘ಕಾಂತಾರ ೧’ ಚಿತ್ರ ತಂಡಕ್ಕೆ ನೋಟೀಸ್

ಹೊಸನಗರ: ‘ಕಾಂತಾರ ೧’ ಚಿತ್ರದ ಚಿತ್ರೀಕರಣ ಸಂದರ್ಭ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಹೊಸನಗರ ತಹಶೀಲ್ದಾರರು ತಂಡಕ್ಕೆ ನೋಟೀಸ್ ನೀಡಿದ್ದು, ಮೂರು ದಿನದೊಳಗೆ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.
ಚಿತ್ರೀಕರಣ ಸಮಯದಲ್ಲಿ ಮಾಣಿ ಜಲಾಶಯದಲ್ಲಿ ದೋಣಿ ಮಗುಚಿ 30 ಜನ ನೀರಿನಲ್ಲಿ ಬಿದ್ದು, ನಂತರ ಈಜಿ ದಡ ಸೇರಿರುತ್ತಾರೆ. ಹಾಗೆಯೇ ಒಂದು ಅಂಬುಲೆನ್ಸ್ ಚಿತ್ರೀಕರಣದ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿರುವ ಬಗ್ಗೆ ಘಟನೆ ನಡೆದಿತ್ತು.
ಈ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲ್ಲೂಕು ಆಡಳಿತಕ್ಕಾಗಲಿ, ಜಿಲ್ಲಾಡಳಿತಕ್ಕಾಗಲಿ ಯಾವುದೇ ಮಾಹಿತಿ ನೀಡಿರುವುದಿಲ್ಲ ಎಂದು ಹೊಸನಗರದ ತಹಶೀಲ್ದಾರ್ ರಶ್ಮೀ ಹಾಲೇಶ್ ಚಿತ್ರತಂಡಕ್ಕೆ ನೋಟೀಸ್ ನೀಡಿದ್ದಾರೆ.
ಜಿಲ್ಲಾಧಿಕಾರಿಯವರು ಈ ಬಗ್ಗೆ ವರದಿ ಕೇಳಿದ್ದು, ನಗರ ಹೋಬಳಿಯ ರಾಜಸ್ವ ನಿರೀಕ್ಷಕರು, ನಿಮ್ಮ ಸಂಸ್ಥೆಯ ಮ್ಯಾನೇಜರ್‌ಗೆ ಅನುಮತಿ ಪತ್ರಗಳನ್ನು ಹಾಜರುಪಡಿಸಲು ದೂರವಾಣಿ ಮೂಲಕ ಸಂಪರ್ಕಿಸಿದರೂ ಸಹ ನೀವು ಯಾವುದೇ ಸ್ಪಂದನೆ ನೀಡಿರುವುದಿಲ್ಲ ಎಂದು ನೋಟೀಸ್‌ನಲ್ಲಿ ಹೇಳಿದ್ದಾರೆ.
ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನೂ ಇಲ್ಲವೆಂದು ಭಾವಿಸಿ ಚಿತ್ರೀಕರಣಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.