ಕಾಂತರಾಜ್ ವರದಿ ತಿರಸ್ಕರಿಸುವುದಿಲ್ಲ: ಮರುಗಣತಿಗೆ ಮಾತ್ರ ಹೈಕಮಾಂಡ್ ಸೂಚನೆ

Siddaramaiah

ಬೆಳಗಾವಿ ಜಿಲ್ಲೆ ವಿಭಜನೆಗೆ ಚಿಂತನೆ- ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಸಂ.ಕ ಸಮಾಚಾರ, ಚಿಕ್ಕಬಳ್ಳಾಪುರ: ಹಿಂದುಳಿದ ವರ್ಗಗಳ ಜಾತಿಗಣತಿಯ ಬಗ್ಗೆ ಕೆಲವು ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಕಡಿಮೆ ಅವಧಿಯಲ್ಲಿಯೇ ಜಾತಿಗಳ ಮರುಗಣತಿ ಕೈಗೊಳ್ಳಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೌರಿಬಿದನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಮೀಕ್ಷೆ ನಡೆದು 10 ವರ್ಷಗಳಾಗಿರುವ ಕಾರಣ ಜನಸಂಖ್ಯೆಯ ಗಣತಿ ನಡೆಸಲಾಗುವುದು. ಆದರೆ ವರದಿಯನ್ನು ನಾವು ತಿರಸ್ಕರಿಸುವುದಿಲ್ಲ. ತಾತ್ವಿಕವಾಗಿ ವರದಿಯನ್ನು ಒಪ್ಪಿಕೊಳ್ಳಲಾಗಿದೆ ಎಂದರು.
ಕಾಂತರಾಜ ಆಯೋಗ ವರದಿ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾರ ಮುಖ್ಯಮಂತ್ರಿಗಳಿಗೆ ನಿರಾಸೆ ತಂದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಇದು ನಮ್ಮ ತೀರ್ಮಾನವಲ್ಲ ಎಂದರು.

ಬಿಜೆಪಿಯಿಂದ ಸಿಎಂ ರಾಜಿನಾಮೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುವುದು ಮತ್ತು ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ. ಬಿಜೆಪಿ ಎಲ್ಲದರಲ್ಲೂ ರಾಜಕೀಯವನ್ನು ಮಾಡೇ ಮಾಡುತ್ತದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅಭಿಪ್ರಾಯಪಟ್ಟರು. ಕುಂಭಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಸತ್ತರು. ಸೇತುವೆಯೊಂದು ಉದ್ಘಾಟನೆ ದಿನವೇ ಬಿದ್ದು 140 ಜನ ಸತ್ತರು. ಕೋವಿಡ್‌ನ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ 23 ಜನ ಸತ್ತಾಗ ಬಸವರಾಜ ಬೊಮ್ಮಾಯಿ ರಾಜಿನಾಮೆ ನೀಡಿದರೆ ಎಂದು ಪ್ರಶ್ನಿಸಿದರು.

ಬಳ್ಳಾರಿಯಲ್ಲಿ ಇ.ಡಿ ದಾಳಿ ಕುರಿತು ಪ್ರತಿಕ್ರಿಯಿಸಿ ಯಾವುದೇ ಕಾನೂನಿನ ಉಲ್ಲಂಘನೆಯಾಗಿದ್ದರೆ ಅದಕ್ಕೆ ನಾವು ಬೆಂಬಲಿಸುವುದಿಲ್ಲ. ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಕಾನೂನಿನ ಅನುಷ್ಟಾನಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ನಾಮಕರಣ ಮಾಡಲು ಗೃಹ ಸಚಿವ ಜಿ.ಪರಮೇಶ್ವರ್ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಚಿವ ಸಂಪುಟದ ಮುಂದೆ ಬಂದಾಗ ಪರಿಶೀಲಿಸಲಾಗುವುದು ಎಂದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲಾಗಿದೆ. ಕಳೆದ ವರ್ಷ 52000 ಕೋಟಿ ರೂ.ಗಳ ಬಂಡವಾಳ ವೆಚ್ಚ ಇತ್ತು. ಈ ವರ್ಷ 83 ಸಾವಿರ ಕೋಟಿಯಾಗಿದೆ. 31000 ಕೋಟಿ ಬಂಡವಾಳ ವೆಚ್ಚ 1 ವರ್ಷದಲ್ಲಿ ಹೆಚ್ಚಾಗಿದೆ. ಹೀಗಿರುವಾಗ ಸರ್ಕಾರ ದಿವಾಳಿ ಹೇಗೆ ಆಗುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಐವತ್ತು ಸಾವಿರಕ್ಕೂ ಹೆಚ್ಚು ಅನುದಾನ ಒದಗಿಸಲಾಗಿದೆ ಎಂದರು.

2 ವರ್ಷಗಳಲ್ಲಿ ಎತ್ತಿನಹೊಳೆ ಪೂರ್ಣ: ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲಿ ಮುಕ್ತಾಯವಾಗಬಹುದು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಈ ಭಾಗದ ಸಚಿವರು, ಶಾಸಕರು, ಹಾಗೂ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.

ರಾಜ್ಯಪಾಲರನ್ನು ನಾನೇ ಆಹ್ವಾನಿಸಿದ್ದೆ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ರಾಜ್ಯಪಾಲರು ಅವರಾಗೇ ಬರಲಿಲ್ಲ, ನಾನೇ ಆಹ್ವಾನಿಸಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಜೂ.4ರಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಆರ್‌ಸಿಬಿಯ ವತಿಯಿಂದ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನನಗೆ ಅಂದು ಬೆಳಿಗ್ಗೆ 11.29 ನಿಮಿಷಕ್ಕೆ ಕೆಎಸ್‌ಸಿಎ ವತಿಯಿಂದ ಶಂಕರ್ ಮತ್ತು ಜಯರಾಮ್ ಅವರು ಆಹ್ವಾನ ನೀಡಿ ಮನವಿ ಮಾಡಿಕೊಂಡರು. ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನು ಆಹ್ವಾನ ಮಾಡಿರುವುದಾಗಿ ತಿಳಿಸಿದರು.
ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಾಚಾರವಾಗಿದ್ದು ಅದು ತಪ್ಪು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದು ನೀವು ಬನ್ನಿ ಎಂದು ಆಹ್ವಾನಿಸಿದೆ. ರಾಜ್ಯಪಾಲರು ಕಾರ್ಯಕ್ರಮಕ್ಕೆ ಆಗಮಿಸಿದರು. ಸನ್ಮಾನ ಕಾರ್ಯಕ್ರಮ 20 ನಿಮಿಷಗಳಲ್ಲಿ ಮುಗಿದುಹೋಯಿತು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನದ ಅಗತ್ಯವಿದ್ದರೆ ಅನುದಾನ ಒದಗಿಸಲಾಗುವುದು. ಕನ್ನಡದ ಅಭಿವೃದ್ಧಿಗೆ ಯಾವುದೇ ಕಾರಣಕ್ಕೂ ಅನುದಾನವಿಲ್ಲ ಎಂದು ಹೇಳುವುದಿಲ್ಲ. ವಿಧಾನ ಪರಿಷತ್ ಸದಸ್ಯರ ನಾಮ ನಿರ್ದೇಶನದ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ಮಾಡಬೇಕಿದ್ದು ಅದನ್ನು ಮುಂದಕ್ಕೆ ಹಾಕಿದ್ದೇವೆ ಎಂದರು.

ಬೆಳಗಾವಿ ಜಿಲ್ಲೆ ವಿಭಜನೆ ಚರ್ಚಿಸಿ ತೀರ್ಮಾನ: ಬೆಳಗಾವಿಯಲ್ಲಿ ಮಾತ್ರ ಹೊಸ ಜಿಲ್ಲೆ ರಚಿಸುವ ಬಗ್ಗೆ ಬೇಡಿಕೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಶಾಸಕರು, ಸಚಿವರು ಮಾತು ಸಂಸದರ ಸಭೆಯನ್ನು ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಬಿದ್ದರೆ ಎಷ್ಟೇ ಹಣ ಕೊಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾವಿಗೆ ಬೆಂಬಲ ಬೆಲೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಮಾವಿನ ಬೆಲೆ ಕುಸಿತದ ಬೆಂಬಲ ಬೆಲೆ ನೀಡುವ ಬಗ್ಗೆ ಮಾತನಾಡಿ ಆಂಧ್ರದಲ್ಲಿ ತೋತಾಪುರಿ ಮಾವಿಗೆ ಒಂದು ಕೆಜಿಗೆ 4 ರೂ. ನೀಡಲಾಗುತ್ತಿದ್ದು, ಇಲ್ಲಿಯೂ ಕೊಡಬೇಕು ಎನ್ನುವ ಬೇಡಿಕೆ ಸಚಿವ ಎಂ.ಸಿ.ಸುಧಾಕರ್ ಅವರು ಮಾಡಿದ್ದು, ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು ಎಂದರು.