ಹೊಸಪೇಟೆ: ಎಲ್ಲಿಯವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುತ್ತದೋ, ಅಲ್ಲಿಯವರೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ. ಇದು ನಮ್ಮ ವಚನ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ’ದಲ್ಲಿ ಮಾತನಾಡಿ ಈ ಎರಡು ವರ್ಷಗಳ ʼಸಮರ್ಪಣಾ ಸಂಕಲ್ಪʼ ಕೇವಲ ಸಂಭ್ರಮದ ಆಚರಣೆಯಲ್ಲ ನಮಗೆ ಆಶೀರ್ವದಿಸಿದ ಕನ್ನಡಿಗರ ಋಣ ತೀರಿಸುವ ಪ್ರತಿಜ್ಞೆ ಮಾಡಲು ಸೇರಿರುವ ವೇದಿಕೆ. ಐದು ಗ್ಯಾರಂಟಿಗಳನ್ನು ನೀಡಿ ಜನರ ಬದುಕನ್ನು ಹಸನು ಮಾಡಿ, ಈಗ ಕಂದಾಯ ಇಲಾಖೆಯ ಮೂಲಕ 6ನೇ ‘ಭೂ ಗ್ಯಾರಂಟಿʼ ನೀಡಿದ್ದೇವೆ. ಈ ಕಾರ್ಯಕ್ರಮ ರಾಜ್ಯದ ಇತಿಹಾಸದಲ್ಲಿ ಐತಿಹಾಸಿಕ ಪುಟಕ್ಕೆ ಸೇರಿದೆ.
ಈವರೆಗೂ ನುಡಿದಂತೆ ನಡೆದಿದ್ದೇವೆ, ಮುಂದೆಯೂ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತೇವೆ. ಕಳೆದ ಎರಡು ವರ್ಷಗಳಲ್ಲಿ ಕೇವಲ ಗ್ಯಾರಂಟಿಗಳಷ್ಟೇ ಅಲ್ಲ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೇವೆ. ಪ್ರತಿ ಇಲಾಖೆಯ ಮೂಲಕವೂ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಂಡು, ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡುತ್ತಿದ್ದೇವೆ. ಗ್ರಾಮೀಣ ರಸ್ತೆಗಳ ಸುಧಾರಣೆ, ಉದ್ಯೋಗ ಸೃಷ್ಟಿಗೆ, ರೈತರಿಗೆ ಅನುಕೂಲ ಮಾಡಿಕೊಡಲು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ರಾಜ್ಯದ ಕೆರೆಗಳನ್ನು ತುಂಬಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ರಾಹುಲ್ ಗಾಂಧಿಯವರು ನಮ್ಮ ರಾಜ್ಯದಲ್ಲಿ ʼಭಾರತ್ ಜೋಡೋʼ ಯಾತ್ರೆ ನಡೆಸಿದ ಎಲ್ಲಾ ಕ್ಷೇತ್ರಗಳನ್ನೂ ನಾವು ಗೆದ್ದಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಅದರಲ್ಲೂ ಕಲ್ಯಾಣ ಕರ್ನಾಟಕ ನಮ್ಮ ಸರ್ಕಾರ ಸ್ಥಾಪನೆಗೆ ಅತಿಹೆಚ್ಚು ಶಾಸಕರುಗಳನ್ನು ಕೊಟ್ಟಿದೆ. ಅದಕ್ಕಾಗಿ ಈ ಭಾಗದ ಅಭಿವೃದ್ಧಿಗೆ ವಾರ್ಷಿಕವಾಗಿ 5 ಸಾವಿರ ಕೋಟಿ ಅನುದಾನವನ್ನು ನೀಡುತ್ತಿದ್ದೇವೆ.
ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ; ಅವರಿಗೆ ರಾಜ್ಯದ ಏಳ್ಗೆ ಕಣ್ಣಲ್ಲಿ ನೋಡಲಾಗುತ್ತಿಲ್ಲ. ಅವರು ಟೀಕೆಗಳನ್ನ ಮಾಡುತ್ತಿರಲಿ. ನಾವು ಜನರ ಬದುಕನ್ನು ಉಳಿಸುವ ಕೆಲಸವನ್ನು ಮುಂದುವರಿಸುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ನಮ್ಮ ಗ್ಯಾರಂಟಿಗಳು ಸಾಕ್ಷಿ; ಈ ಕಾರ್ಯಕ್ರಮ ಸಾಕ್ಷಿ. ಈ ʼಭೂ ಗ್ಯಾರಂಟಿʼ ಕಾರ್ಯಕ್ರಮವನ್ನು ಐತಿಹಾಸಿಕವಾಗಿ ಆಯೋಜಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮತ್ತವರ ತಂಡ, ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಪಕ್ಷದ ಅಧ್ಯಕ್ಷನಾಗಿ, ರಾಜ್ಯದ ಉಪಮುಖ್ಯಮಂತ್ರಿಯಾಗಿ ಮನದುಂಬಿ ಅಭಿನಂದಿಸುತ್ತೇನೆ ಎಂದರು.