ಹುಬ್ಬಳ್ಳಿ: ವಾಲ್ಮೀಕಿ ನಿಗಮ, ಮುಡಾ ಹಗರಣ ಮೂಲಕ ಭ್ರಷ್ಟಾಚಾರ ದರ್ಶನ ಮಾಡಿಸಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹಗರಣ ನಡೆಸಿದೆ. ಮೈಸೂರು ಮೂಲದ ಸೈಯದ್ ಸಮೀಉಲ್ಲಾ ಎಂಬುವವರ ಮಾಲೀಕತ್ವದ ರೈತ ಸೇವಾ ಅಗ್ರಿಕಲ್ಚರ್ ಡೆವಲಪ್‌ಮೆಂಟ್ ಇಕ್ವಿಪ್‌ಮೆಂಟ್ ಎಂಬ ಕಂಪನಿಗೆ ಪೊಲೀಸ್ ಇಲಾಖೆಯ ಗುಜರಿ ವಸ್ತು ಮತ್ತು ವಾಹನಗಳನ್ನು ಪೂರೈಸಲು ಆದೇಶಿಸಿದೆ. ಟೆಂಡರ್ ನಿಯಮ ಗಾಳಿಗೆ ತೂರಿ, ವ್ಯಾಪಕ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಜಿಲ್ಲೆಯಾದ ಮೈಸೂರಿನವರು ಮತ್ತು ಮುಸ್ಲಿಂ ಸಮುದಾಯದ ವ್ಯಕ್ತಿಗೆ ಸೇರಿದ ಕಂಪನಿ ಎಂಬ ಕಾರಣಕ್ಕೆ ಅವರಿಗೆ ಪೊಲೀಸ್ ಇಲಾಖೆಯ ಗುಜರಿ ವಸ್ತು, ವಾಹನಗಳನ್ನು ಒದಗಿಸಲು ಆದೇಶಿಸುವ ಮೂಲಕ ಮುಖ್ಯಮಂತ್ರಿ ಮುಸ್ಲಿಂ ತುಷ್ಟೀಕರಣ ನೀತಿ ಮುಂದುವರಿಸಿದ್ದಾರೆ. ಸರ್ಕಾರಿ ಇಲಾಖೆಗಳ ವಸ್ತುಗಳ ವಿಲೇವಾರಿಗೆ ಟೆಂಡರ್ ಕರೆಯಬೇಕು. ಆದಕ್ಕಾಗಿಯೇ ನೀತಿ ನಿಯಮಗಳಿವೆ. ಆದರೆ, ಈ ವಿಷಯದಲ್ಲಿ ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು. ನಿಯಮಾವಳಿ ಪ್ರಕಾರ ಪೊಲೀಸ್ ಇಲಾಖೆ ಗುಜರಿ ವಸ್ತು, ವಾಹನ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.