ಕಾಂಗ್ರೆಸ್ ಶಾಸಕ ಶಿವಗಂಗಾ ನೆತ್ತಿಕೂಡಿರದ ಕೂಸು: ರೇಣುಕಾಚಾರ್ಯ ವ್ಯಂಗ್ಯ

ದಾವಣಗೆರೆ: ರಾಜಕೀಯದಲ್ಲಿ ನೆತ್ತಿಕೂಡದ ಕೂಸು, ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ನನ್ನ ವಿರುದ್ಧ ಮಾಡಿರುವ ಆರೋಪಗಳ ಹಿಂದೆ ಸ್ವಪಕ್ಷದವರ ಪಿತೂರಿ ಅಡಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ನನ್ನನ್ನು ಉಚ್ಚಾಟಿಸಲು ಹೈಕಮಾಂಡ್‌ಗೆ ನನ್ನ ತಪ್ಪುಗಳನ್ನು ಹೇಳಬೇಕಿದೆ. ಆದರೆ ನಾನು ಯಾವ ತಪ್ಪನ್ನು ಮಾಡಿಲ್ಲ. ಹಾಗಾಗಿ ಸ್ವಪಕ್ಷದವರು ಶಿವಂಗಾ ಬಸವರಾಜ್ ಅವರನ್ನು ಬಳಸಿಕೊಂಡು ಹುನ್ನಾರ ನಡೆಸಿದ್ದಾರೆ ಎಂದು ಹರಿಹಾಯ್ದರು.
ನನ್ನ ಬದುಕು ಬಿಳಿಹಾಳೆ ಇದ್ದಂತೆ. ಹಾಗಾಗಿಯೇ ನನ್ನ ವಿರುದ್ಧ ಆರೋಪಗಳು ಕೇಳಿಬಂದಾಗ್ಯೂ ಹೊನ್ನಾಳಿಯ ಜನರು 2007ರ ಚುನಾವಣೆಯಲ್ಲಿ ಮತ್ತೆ ನನ್ನ ಕೈಹಿಡಿದು ಗೆಲ್ಲಿಸಿದ್ದರು. ಇಲ್ಲದಿದ್ದರೆ ನಾನು ರಾಜಕೀಯವಾಗಿ ನಿರ್ನಾಮವಾಗಿ ಹೋಗುತ್ತಿದ್ದೆ. ನನ್ನ ಕ್ಷೇತ್ರದ ಜನರಿಗೆ ನಾನು ಋಣಿಯಾಗಿದ್ದೇನೆ. ಈಗ ಸ್ವಪಕ್ಷದವರು ನನ್ನನ್ನು ಪಕ್ಷದಿಂದ ಉಚ್ಛಾಟಿಸಲು ಹುನ್ನಾರ ನಡೆಸುತ್ತಿದ್ದು, ಶಾಸಕ ಶಿವಗಂಗಾ ಬಸವರಾಜ್ ಅವರನ್ನು ಮುಂದೆ ಬಿಟ್ಟು ನನ್ನ ವಿರುದ್ಧ ಆರೋಪ ಮಾಡುವಂತೆ ಪಿತೂರಿ ನಡೆಸಿದ್ದಾರೆ ಎಂದರು.
ಶಾಸಕ ಶಿವಗಂಗಾ ಬಸವರಾಜ್ ಅವರು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಗಂಭೀರ ಆರೋಪ ಮಾಡಿರುವುದಷ್ಟೇ ಅಲ್ಲದೇ, ಮರಳು ದಂಧೆ, ಮಕ್ಕಳ ಶಿಕ್ಷಣಕ್ಕೆ ಎಸ್ಸಿ ಜಾತಿ ಪ್ರಮಾಣ ಪತ್ರ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಹಣ ಪಡೆದಿರುವುದಾಗಿ ನೀಡಿರುವ ವಿವಾದಾತ್ಮಕ ಹೇಳಿಕೆಗಳು ನಿರಾಧಾರವಾಗಿದ್ದು, ಅವರೆಲ್ಲೆ ಕರೆದರು ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಮತ್ತು ಇವೆಲ್ಲವನ್ನೂ ಅವರು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಷ್ಟೇ ಅಲ್ಲ. ನೇಣುಗಂಬಕ್ಕೆ ಏರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಶಿವಗಂಗಾ ಬಸವರಾಜ್ ರಾಜಕೀಯದಲ್ಲಿನ್ನೂ ನೆತ್ತಿಕೂಡದ ಎಳೆ ಹಸುಳೆ. ನಾನು ಅವರು ಮರಳುದಂಧೆ ನಡೆಸುತ್ತಾರೆ ಎಂದು ಹೇಳಿದ್ದು ನಿಜ ಹೊರತು ಕ್ಯಾಸಿನೊ, ಇಸ್ಪೀಟ್ ದಂಧೆ ನಡೆಸಿರುವ ಬಗ್ಗೆ ಮಾತಾಡಿಲ್ಲ. ಅವರು ರಾಜಕೀಯವಾಗಿ ಆರೋಗ್ಯಕರ ಚರ್ಚೆಗೆ ಬರಬೇಕೆ ಹೊರತು ಹೀಗೆ ವೃತಾ ಆರೋಪ ಹೊರಿಸುವುದು ಸರಿಯಲ್ಲ. ಮರಳುದಂಧೆಯ ಬಗ್ಗೆ ಒಪ್ಪಿಕೊಂಡಿರುವ ಅವರು ಮರಳು ಮಾರಾಟದ ಬಗ್ಗೆ ಪರವಾನಿಗೆ ಇದ್ದರೆ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದರು.
ನಾನು ಮರಳು ದಂಧೆ ನಡೆಸಿಲ್ಲ. ಅವಶ್ಯಕ ಇರುವವರಿಗೆ, ಮಠಮಾನ್ಯಗಳಿಗೆ ಮರಳು ಕೊಡಿಸಿದ್ದೇನೆ ಹೊರತು ಯಾರಿಂದಲೂ ನಾನು 10ರೂ. ವನ್ನು ಪಡೆದಿಲ್ಲ. ನನ್ನ ಮಕ್ಕಳು ಪ್ರತಿಭಾನ್ವಿತರಾಗಿ ಓದಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮಾಡಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹಣ ಪಡೆದಿಲ್ಲ. ನನ್ನ ವಿರುದ್ಧ ಆರೋಪಿಸಿರುವ ಶಿವಗಂಗಾ ಲೋಕಸಭಾ ಚುನಾವಣೆಗೂ ಆರು ದಿನ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಾರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ ಎಂಬುದು ನಮಗೂ ಗೊತ್ತಿರುವ ವಿಷಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲೋಕಿಕೆರೆ ನಾಗರಾಜ್, ಮಾಡಾಳು ಮಲ್ಲಿಕಾರ್ಜುನ್, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ಕೊಳೆನಹಳ್ಳಿ ಸತೀಶ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ರಾಜು ವೀರಣ್ಣ, ಪ್ರವೀಣ್ ಜಾಧವ್ ಮತ್ತಿತರರು ಹಾಜರಿದ್ದರು.