ಶಿವಮೊಗ್ಗ : ಕೆಲವು ಹಿರಿಯರ ಹತ್ತಿರ ಚರ್ಚೆಮಾಡಿ, ನಂತರ ಬಿಜೆಪಿಗೆ ಸೇರಿಕೊಳ್ಳುವೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನೂಂತೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಹಲವು ಪಕ್ಷಗಳ ಮುಖಂಡರು ನಿಮಗೆ ಮತ್ತು ನಿಮ್ಮ ಪುತ್ರನಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಕೊಡುತ್ತೇವೆ ಬನ್ನಿ ಎಂದು ಆಹ್ವಾನ ಮಾಡಿದ್ದಾರೆ. ಆದರೆ ನಾನು ಹೋಗುವುದಿಲ್ಲ. ನಾನು ಬಿಜೆಪಿಯಲ್ಲೇ ಮೊದಲು ಇದ್ದದ್ದು. ಈಗಲೂ ಅಲ್ಲಿಗೆ ಹೋಗುತ್ತೇನೆ ಎಂದರು.
ಕುರುಬ ಸಮಾಜದ ಹಲವು ನಾಯಕರು ನೀವು ಬಿಜೆಪಿ ಬರಬೇಕು ಎಂದು ಹೇಳುತ್ತಿದ್ದಾರೆ. ಅದು ಅವರ ಪ್ರೀತಿ. ನಾನು ಬಿಜೆಪಿ ಹೋಗಬೇಕೆಂಬುದು ಹಲವರ ಆಸೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೆಲವರ ಹತ್ತಿರ ಚರ್ಚೆಮಾಡಿ, ನಿರ್ಧಾರ ಮಾಡುತ್ತೇನೆ ಎಂದರು.
ಕಾಂಗ್ರೆಸ್ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಅದು ಸರ್ಕಾರ ಬೀಳುತ್ತದೆಯೋ ಅಥವಾ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಇಳಿಯುತ್ತಾರೋ ಗೊತ್ತಿಲ್ಲ. ಸುರ್ಜಿವಾಲಾರವರು ಕೇವಲ ೪೦ ಜನ ಶಾಸಕರನ್ನು ಕರೆದು, ಸಭೆ ನಡೆಸುತ್ತಿದ್ದಾರೆ. ೧೩೬ ಜನರಲ್ಲಿ ಈ ೪೦ ಜನರನ್ನು ಮಾತ್ರ ಏಕೆ ಗುಂಪು ಕಟ್ಟಿಕೊಂಡು ಚರ್ಚೆ ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಇಂದಿರಾಗಾಂಧಿಯವರು ತಮ್ಮ ಸರ್ವಾಧಿಕಾರದ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ, ಸಂವಿಧಾನದ ಮೂಲ ಪೀಠಿಕೆಯಲ್ಲಿ ೧೯೭೬ರ ಡಿಸೆಂಬರ್ ೧೮ರಂದು ಸೇರಿಸಿದ್ದಾರೆ. ಈ ಎರಡು ಪದಗಳು ತುರ್ತು ಪರಿಸ್ಥಿತಿಯಲ್ಲಿ ತುರಿಕಿದ ಪದಗಳಾಗಿವೆ. ಆದರೆ ಕಾಂಗ್ರೆಸ್ಸಿಗರು ಇದನ್ನು ಮರೆತು ಈಗ ಸಂವಿಧಾನ ವಿರೋಧಿ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು