ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಹಾಕಿಕೊಟ್ಟ ಸಂಯುಕ್ತ ಕರ್ನಾಟಕ ಬೆಳ್ಳಿಹಬ್ಬ

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಸರ್ವಾಂಗೀಣ ಅಭ್ಯುದಯಕ್ಕೆ ಹೊಸ ದಿಕ್ಸೂಚಿ ಹಾಕಿಕೊಡುವ ಮೂಲಕ ಸಂಯುಕ್ತ ಕರ್ನಾಟಕ' ಕಲಬುರಗಿ ಆವೃತ್ತಿಯ ಬೆಳ್ಳಿಹಬ್ಬಕಲ್ಯಾಣ ಸಿರಿ’ಗೆ ಶನಿವಾರ ಅರ್ಥಪೂರ್ಣ ತೆರೆಬಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು, ಸಂಯುಕ್ತ ಕರ್ನಾಟಕ'ವನ್ನು ಗಂಭೀರವಾಗಿ ಪರಿಗಣಿಸದೇ ರಾಜ್ಯದ ಯಾವ ರಚನಾತ್ಮಕ ವಿದ್ಯಮಾನವೂ ಪೂರ್ಣಗೊಳ್ಳುವುದಿಲ್ಲ ಎಂದು ಮನದುಂಬಿ ಬಣ್ಣಿಸಿದರು. ಇಲ್ಲಿಯ ಖಮಿತಕರ್ ಭವನದಲ್ಲಿ ಶುಕ್ರವಾರ (ಜೂ. ೧೩) ಆರಂಭವಾಗಿದ್ದ ಬೆಳ್ಳಿಹಬ್ಬ ಕೇವಲ ಔಪಚಾರಿಕ ಕಾರ್ಯಕ್ರಮ ಆಗಿರಲಿಲ್ಲ. ಬದಲಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ನಡೆದ ಗಂಭೀರ ಚಿಂತನೆಯಾಗಿತ್ತು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಕಲ್ಯಾಣ ಪ್ರಾಂತ್ಯಕ್ಕೆ ೩೭೧ನೇ ಜೆ ಅನ್ವಯ ವಿಶೇಷ ಸ್ಥಾನಮಾನ ಬರಲು ಪ್ರಮುಖ ಕಾರಣೀಕರ್ತ ಮಲ್ಲಿಕಾರ್ಜುನ ಖರ್ಗೆ ಅವರ ಉದ್ಘಾಟನೆ ಬೆಳ್ಳಿಹಬ್ಬದ ಎರಡು ದಿನಗಳ ನಕ್ಷೆಯನ್ನು ಹಾಕಿಕೊಟ್ಟಿತು. ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದಿರುವಿಕೆ ಮತ್ತು ವಿಶೇಷ ಸ್ಥಾನಮಾನದ ಪೂರ್ಣ ಉಪಯೋಗ ಮಾಡಿಕೊಳ್ಳದೇ ಇರುವುದನ್ನು ಖರ್ಗೆ ಅತ್ಯಂತ ಮನೋಜ್ಞವಾಗಿ ವಿವರಿಸಿ ಬೌದ್ಧಿಕ ಚಿಂತನೆಯ ಬಾಗಿಲು ತೆರೆದರು. ಇದಾದ ನಂತರ ನಡೆದ೩೭೧ (ಜೆ) ಕಲ್ಯಾಣ ಕರ್ನಾಟಕ’ಕ್ಕೆ ಏನು ಮಾಡಿದೆ? ಏನು ಆಗಬೇಕಿತ್ತು? ಅಭಿವೃದ್ಧಿ ಏಕೆ ಹಿನ್ನಡೆಯಾಗಿದೆ ಎಂಬ ವಿಚಾರಗೋಷ್ಠಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವಂತಿತ್ತು.
ಕಲಬುರಗಿ ಪ್ರಾಂತ್ಯದಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸದೇ ಇದ್ದರೆ ಯಾವ ಸೌಲಭ್ಯದಿಂದಲೂ ಪ್ರಯೋಜನ ಇಲ್ಲ ಎಂಬುದು ಈ ಗೋಷ್ಠಿಯ ಸಾರವಾಗಿತ್ತು.
ಅಭಿವೃದ್ಧಿ ಮತ್ತು ಈ ಪ್ರಾಂತ್ಯಕ್ಕೆ ಅನುಸರಿಸಬೇಕಾದ ಮಾನದಂಡಗಳ ಕುರಿತು ವ್ಯಾಪಕ ಚಿಂತನ ಮಂಥನಗಳು ನಡೆದ ಬೆನ್ನಲ್ಲೇ ಇಲ್ಲಿನ ಸಹಕಾರ ಚಳವಳಿಯ ಅನೇಕ ಸಕಾರಾತ್ಮಕ ಅಂಶಗಳೂ ಬೆಳಕಿಗೆ ಬಂದಿದ್ದು ಉಲ್ಲೇಖಾರ್ಹ. ಸಮಾರೋಪ ಸಮಾರಂಭದ ದಿನ ನಡೆದ ಶೈಕ್ಷಣಿಕ ಗೋಷ್ಠಿಯಂತೂ ಪ್ರಾಂತ್ಯದ ಮಕ್ಕಳು ಮತ್ತು ಭವಿಷ್ಯಕ್ಕೆ ಬೆಳಕಿಂಡಿಯಂತಿತ್ತು.
ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರು ಮಕ್ಕಳು ಹಾಗೂ ಭವಿಷ್ಯದ ಕುರಿತು ಆಡಿದ ಮಾತುಗಳನ್ನು ಕೇಳಲು ಸಹಸ್ರಾರು ಜನ ಕಿಕ್ಕಿರಿದು ಸೇರಿದ್ದರು.
ಆ ನಂತರದ ಆಹಾರ ಮತ್ತು ಆರೋಗ್ಯ ಕುರಿತ ಗೋಷ್ಠಿಯಲ್ಲಿ ಪ್ರಸಿದ್ಧ ನಿಸರ್ಗ ಚಿಕಿತ್ಸಾ ತಜ್ಞ ಡಾ. ವೆಂಕಟರಮಣ ಹೆಗಡೆ ನೀಡಿದ ಸಲಹೆಗಳನ್ನು ಜನ ತುದಿಗಾಲ ಮೇಲೆ ನಿಂತು ಕೇಳಿದರು. ಶಿಕ್ಷಣ ಮತ್ತು ಆರೋಗ್ಯ ಗೋಷ್ಠಿಗಳಲ್ಲಿ ಶಾಲಾ ಕಾಲೇಜು ಮಕ್ಕಳು ಕೂಡ ಸಕ್ರಿಯವಾಗಿ ಭಾಗವಹಿಸಿ ತಜ್ಞರ ಮಾತುಗಳನ್ನು ಆಲಿಸಿದ್ದು ವಿಶೇಷ.
ಈ ಎರಡೂ ಬೌದ್ಧಿಕ ಸ್ತರದ ಗೋಷ್ಠಿಗಳು ಸಮಗ್ರ ಕಲ್ಯಾಣದ ಅಭ್ಯುದಯಕ್ಕೆ ನಡೆಸಿದ ಚಿಂತನೆ ಬಹುಕಾಲ ಈ ಪ್ರಾಂತ್ಯದ ಪುಟಗಳಲ್ಲಿ ದಾಖಲಾಗಿ ಉಳಿಯಲಿದೆ.
ಉದ್ಘಾಟನೆಯಂತೆಯೇ ಸಮಾರೋಪ ಸಮಾರಂಭ ಕೂಡ ಅಭಿವೃದ್ಧಿಯ ಆಶಯದೊಂದಿಗೇ ಪೂರ್ಣಗೊಂಡಿದ್ದು ಗಮನಾರ್ಹ. ಅತಿಥಿಯಾಗಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ ಕೃಷ್ಣಾ ಅಧಿಸೂಚನೆ ಬೇಗ ಜಾರಿಗೊಳಿಸುವಂತೆ, ಇನ್ನೋರ್ವ ಅತಿಥಿಯಾಗಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಒತ್ತಾಯಿಸಿದ್ದು; ಕೇಂದ್ರ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವೇದಿಕೆಯಲ್ಲೇ ದೊರಕಿದ್ದು ಮರೆಯಲಾಗದ “ಅಭಿವೃದ್ಧಿ ಸಂವಾದ” ಎನ್ನಲಡ್ಡಿಯಿಲ್ಲ.
ಬೆಳ್ಳಿಹಬ್ಬದ ಅಂಗವಾಗಿ ಎರಡೂ ದಿನಗಳಂದೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರ ನಡೆದ ಸಂಗೀತಾ ಕಟ್ಟಿ ಅವರ ಗಾಯನ ಸಂಜೆ, ಹಾಗೂ ಶನಿವಾರ ಸಂಜೆ ನಡೆದ ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಶಿ ಅವರ ಹಾಸ್ಯ ಸಂಜೆಯಲ್ಲಿ ಕಲಬುರಗಿಯ ಜನತೆ ಇನ್ನಿಲ್ಲದ ಉತ್ಸಾಹದಿಂದ ಭಾಗಿಯಾಗಿದ್ದರು.
ಎರಡು ದಿನಗಳ ಭವ್ಯ ಸಮಾರಂಭ ಪತ್ರಿಕೆಯ ತತ್ವ-ನೀತಿಯ ಅನುಸಾರ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಮಗ್ರ ಅಭಿವೃದ್ಧಿ ಚಿಂತನೆಗಳೊಂದಿಗೆ ನಡೆಯಿತು. ರಾಜ್ಯ- ರಾಷ್ಟ್ರದ ಹಿತವೇ ಪತ್ರಿಕೆಯ ಹಿತ ಎಂಬುದನ್ನು ಸಾರಿ ಹೇಳಿತು.