ಕಲಬುರ್ಗಿ: ಕಲ್ಯಾಣ ಕರ್ನಾಟಕದ ಮಕ್ಕಳು ದಡ್ಡರು ಎನ್ನುವ ಅನಿಸಿಕೆ ತಪ್ಪು. ಒಂದು ವೇಳೆ ಹಾಗಿದ್ದದ್ದೇ ಆದರೆ, ಅನುಭವ ಮಂಟಪ ಈ ನೆಲದಲ್ಲಿ ಸಾಕಾರಗೊಂಡಿದ್ದು ಹೇಗೆ? ಶರಣ-ಸಂತರು, ಸೂಫಿ- ಅವಧೂತರು, ದಾಸರು ಎಲ್ಲರೂ ಈ ನೆಲದಿಂದಲೇ ಹೇಗೆ ಬಂದರು ಎಂದು ಶಿಕ್ಷಣ ತಜ್ಞ ಮತ್ತು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರಜಗಿ ಶನಿವಾರ ಇಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪ್ರಶ್ನಿಸಿದರು.ಸಂಯುಕ್ತ ಕರ್ನಾಟಕ' ಕಲಬುರ್ಗಿ ಆವೃತ್ತಿಯ ಬೆಳ್ಳಿಹಬ್ಬ
ಕಲ್ಯಾಣ ಸಿರಿ’ಯ ಅಂಗವಾಗಿ ಏರ್ಪಡಿಸಲಾಗಿದ್ದ ನಮ್ಮ ಮಕ್ಕಳು-ನಮ್ಮ ಭವಿಷ್ಯ' ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಮಕ್ಕಳ ಚೈತನ್ಯ ಬಡಿದೆಬ್ಬಿಸಿದರು. ಪಿಯುಸಿ ವಿದ್ಯಾರ್ಥಿ ರೇವಣಗೌಡ ಪಾಟೀಲ
ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನುವ ಮಾದದಂಡವನ್ನು ಯಾವ ರೀತಿ ನಿರ್ಧರಿಸಿದ್ದಾರೆ’ ಎಂದು ಕೇಳಿದ್ದು, ವ್ಯವಸ್ಥೆಯ ಬಗ್ಗೆ ಕರಜಗಿ ಅವರಿಗೆ ಸಾತ್ವಿಕ ಸಿಟ್ಟು ತರಿಸಿತ್ತು.ಅಯ್ಯೋ ಮಾರಾಯಾ, ಕಳೆದ ಎಷ್ಟೋ ವರ್ಷಗಳಿಂದ ಹಿಂದುಳಿದಿರುವ ಮಾತನ್ನು ಕೇಳುತ್ತಿದ್ದೇನೆ. ಇದು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಯಾರು ಹೇಳಿದ್ದು? ಇಂತಹ ಮಾತಿಗೆ ಯಾವ ಅರ್ಥವೂ ಇಲ್ಲ. ಆದ್ದರಿಂದ ಇದನ್ನು ಧಿಕ್ಕರಿಸಿ ಬೆಳೆಯಿರಿ' ಎಂದು ಕಿವಿಮಾತು ಹೇಳಿದರು. ಕೆಟ್ಟ ವ್ಯವಸ್ಥೆಯಿಂದ ಈ ಮಾತು ಹೇಗೆ ಮನದಲ್ಲಿ ಅಚ್ಚೊತ್ತಿದೆ ಎಂಬುದನ್ನು ಸೊಗಸಾದ ಉದಾಹರಣೆ ಮೂಲಕ ಮಕ್ಕಳಿಗೆ ವಿವರಿಸಿದರು.
ಒಂದು ತುಂಟ ಆನೆ ಮರಿ ಇತ್ತು. ತುಂಟತನ ತಡೆಯಲಾಗದೇ ಅದನ್ನು ಸರಪಳಿಯಿಂದ ಬಿಗಿದು ಕಬ್ಬಿಣದ ಸರಳುಗಳಿಗೆ ಕಟ್ಟಿ ಹಾಕಿದ್ದರು. ಸರಪಳಿ ಬಿಚ್ಚಿಕೊಳ್ಳಲು ಅದು ಯತ್ನಿಸಿ ಕೊನೆಗೆ ಸುಮ್ಮನೆ ನಿಲ್ಲತೊಡಗಿತು.ಮರಿ ದೊಡ್ಡದಾದ ಮೇಲೆ ಸರ್ಕಸ್ ಕಂಪನಿಯವರು ಅದನ್ನು ತೆಗೆದುಕೊಂಡು ಹೋದರು. ಇಲ್ಲಿ ಸರಪಳಿಯಿಂದ ಕಟ್ಟಿ ಹಾಕಿಸಿಕೊಂಡಿದ್ದ ಆನೆಯನ್ನು ಹಗ್ಗದೊಂದಿಗೆ ಒಂದು ಸಣ್ಣ ಗೂಟಕ್ಕೆ ಕಟ್ಟಿ ನಿಲ್ಲಿಸಿದರು.
ಆದರೆ ಆನೆ ಸಣ್ಣ ಗೂಟವನ್ನು ಕೀಳುವ ಗೋಜಿಗೇ ಹೋಗದೇ ಸುಮ್ಮನೆ ನಿಂತಿರುತ್ತಿತ್ತು. ಏಕೆಂದರೆ ಸರಪಳಿಯನ್ನೇ ಕಿತ್ತುಕೊಳ್ಳಲು ಆಗಲಿಲ್ಲ ಎಂಬುದು ತಲೆಯಲ್ಲಿ ಪ್ರತಿಷ್ಠಾಪನೆಯಾಗಿ ಹೋಗಿತ್ತು. ಕಲ್ಯಾಣ ಕರ್ನಾಟಕದ ವಿಷಯದಲ್ಲೂ ಹಾಗೇ ಆಗಿದೆ’ ಎಂದು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.
ಬುದ್ಧಿಮತ್ತೆಯಲ್ಲಿ ನೀವೇನೂ ಕಡಿಮೆ ಇಲ್ಲ. ಇನ್ನಾದರೂ ಕೀಳರಿಮೆಯ ಈ ಮಾನಸಿಕತೆಯನ್ನು ತೊಡೆದುಕೊಂಡು ಎದ್ದೇಳಿ ಎಂದರು.
ಕಲಬುರ್ಗಿಯ ವಿವಿಧ ಶಾಲಾ-ಕಾಲೇಜುಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಬೋಧಕ ವರ್ಗ ಮತ್ತು ಪಾಲಕರೂ ಜೊತೆಗೂಡಿದ್ದರು. `ಕಲ್ಯಾಣ ಸಿರಿ’ ಕಾರ್ಯಕ್ರಮ ನಡೆಯುತ್ತಿದ್ದ ಇಲ್ಲಿನ ಖಮಿತಕರ್ ಭವನ ಕರಜಗಿ ಅವರ ಮಾತು ಕೇಳಲು ಕಾಲಿಡಲೂ ಜಾಗವಿಲ್ಲದಂತೆ ತುಂಬಿ ಹೋಗಿತ್ತು.
ಪತ್ರಿಕೆಯ ಸಂಪಾದಕೀಯ ಸಲಹೆಗಾರ ಹುಣಸವಾಡಿ ರಾಜನ್ ಸಂವಾದವನ್ನು ಸಂಯೋಜಿಸಿದ್ದರು. ಲೋಕ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಅಶೋಕ ಹಾರನಹಳ್ಳಿ, ಧರ್ಮದರ್ಶಿಗಳಾದ ಯು.ಬಿ. ವೆಂಕಟೇಶ್ ಮತ್ತು ಡಿ.ಆರ್. ಪಾಟೀಲ ಉಪಸ್ಥಿತರಿದ್ದರು.