ಕಲ್ಯಾಣದ ಕೂಗಿಗೆ ಕಲ್ಯಾಣ ಸಿರಿಯ ಧ್ವನಿ

ನೆರೆದವರ ಕಂಗಳಲ್ಲಿ ಕನಸಿತ್ತು… ಕುತೂಹಲವಿತ್ತು… ಭವಿಷ್ಯತ್ತಿನ ಬದುಕಿನ ಬಗ್ಗೆ ಸಹಜವಾಗಿ ಆತಂಕವೂ ಇತ್ತು.
ಅವರಿಗೆ ಛಲ, ಸ್ಥೈರ್ಯ, ಆತ್ಮವಿಶ್ವಾಸ ಹುಟ್ಟಿಸಿದ್ದು ಕಲ್ಯಾಣ ಸಿರಿ'! ನಿಜ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಸಾಕಷ್ಟು ಜನರಲ್ಲಿ ನಾವೇಕೆ ಉಳಿದವರಂತಲ್ಲ? ನಮ್ಮೂರು ಏಕೆ ಅಭಿವೃದ್ಧಿ ಕಾಣದು? ನಾವೇನೂ ಹಿಂದುಳಿದ ಪ್ರದೇಶದವರು ಬಿಡಿ ಎಂಬ ನೋವನ್ನು ಕೂಡ ಕಟ್ಟಿಕೊಂಡವರು. ತಮ್ಮ ಪ್ರದೇಶದ ಅಭಿವೃದ್ಧಿಗಾಗಿ, ಸಂವಿಧಾನದ ತಿದ್ದುಪಡಿಯೊಂದಿಗೆ ೩೭೧ (ಜೆ) ಮೀಸಲಾತಿ ಸೌಲಭ್ಯಕ್ಕೆ ಪಾತ್ರವಾಗಿ ದಶಕವಾದರೂ ತಮಗಿರುವ ಸೌಲಭ್ಯ, ನೆರವು, ಸ್ಥಾನಮಾನದ ಬಗ್ಗೆ ಇನ್ನೂ ಹಿಂಜರಿಕೆ ಕಳೆದುಕೊಂಡಿಲ್ಲ ಈ ಮುಗ್ಧರು. ಸುಮಾರು ಹದಿನೆಂಟು ಸಾವಿರ ಕೋಟಿ ಮೊತ್ತದ ನೇರ ಅಭಿವೃದ್ಧಿ ಯೋಜನೆಗಳು, ಸಹಸ್ರಾರು ಕೋಟಿ ರೂಪಾಯಿಗಳ ಪರೋಕ್ಷ ಅಭಿವೃದ್ಧಿ ಯೋಜನೆಗಳು ಕಲ್ಯಾಣ ಕರ್ನಾಟಕದಲ್ಲಿ ದಶಕಗಳಿಂದ ನಡೆದಿವೆ. ಅಂತಾರಾಷ್ಟ್ರೀಯ ಮಟ್ಟದ ಶಾಲಾ ಕಾಲೇಜುಗಳು ಆರಂಭವಾಗಿವೆ. ದಾಖಲೆಗಳ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಉದ್ಯೋಗ ಈ ಏಳು ಜಿಲ್ಲೆಗಳ ಜನಕ್ಕೆ ದೊರಕಿದೆ. ದಶಕದಲ್ಲಿ ಹತ್ತು ಸಾವಿರಕ್ಕೂ ಅಧಿಕ ವೈದ್ಯರುಗಳು ಇವೇ ಏಳು ಜಿಲ್ಲೆಗಳಿಂದ ಈಗ ಸ್ಟೆತಸ್ಕೋಪ್ ಹಿಡಿದಿದ್ದಾರೆ. ಹೊಸ ಹೊಸ ಆಸ್ಪತ್ರೆಗಳು, ಉದ್ಯಮಗಳು ತಲೆ ಎತ್ತಿವೆ. ಆದರೆನಾವು ಹಿಂದುಳಿದಿದ್ದೇವೆ’ಎನ್ನುವ ಹಿಂಜರಿಕೆ ಮಾತ್ರ ಹೋಗಿಲ್ಲ. ಇದಕ್ಕೆ ಪ್ರಥಮ ಪ್ರಯತ್ನವಾಗಿ ಕನ್ನಡ ಪತ್ರಿಕೋದ್ಯಮದ ಹಿರಿಯಣ್ಣ ಸಂಯುಕ್ತ ಕರ್ನಾಟಕ'ಕಲ್ಯಾಣ ಸಿರಿ’ ಎಂಬ ವೇದಿಕೆ ಸೃಷ್ಟಿಸಿ, ತನ್ಮೂಲಕ ಎಲ್ಲರನ್ನೂ ಒಂದಾಗಿಸಿ ಕಲ್ಯಾಣ ಕರ್ನಾಟಕದ ಜನತೆಗೆ ಧ್ವನಿ ಕೊಟ್ಟಿತು.
ಎಳೆಯ ಮಕ್ಕಳಿಂದ ಹಿಡಿದು ಕಲ್ಯಾಣ ಕರ್ನಾಟಕದ ಹಕ್ಕು, ಸ್ವಾಭಿಮಾನ, ಸೌಜನ್ಯ, ಪ್ರಜ್ಞೆ ಮೂಡಿಸಿದ ಹೋರಾಟಗಾರರು, ಚಿಂತಕರು, ಸಮಾಜದ ಹಲವು ರಂಗಗಳಲ್ಲಿ ಪ್ರಖ್ಯಾತಿ ಪಡೆದವರು ಎಲ್ಲ ಸೇರಿದ್ದರು.
೩೭೧ (ಜೆ) ಜಾರಿಯಾದ ನಂತರ ಸಾಕಷ್ಟು ಸುಧಾರಣೆಗಳಾಗಿವೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಇನ್ನೂ ಆಗಬೇಕಿದೆ. ಪ್ರತಿ ಬಾರಿಯೂ ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಬಿಎಸ್‌ಸಿ ಎಲ್ಲೆಡೆ ಈ ಭಾಗ ಕೊನೆಯ ನಾಲ್ಕೈದು ಸ್ಥಾನಗಳಲ್ಲಿ ಇರುತ್ತದೆ. ಹಲವು ತೊಡಕುಗಳಿವೆ. ಈ ಭಾಗದಲ್ಲಿ ಉತ್ತಮ ಶಿಕ್ಷಕರು ಸಿದ್ಧರಾಗುತ್ತಿಲ್ಲ. ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿ ನಮ್ಮ ಮಕ್ಕಳನ್ನು ಉತ್ತೇಜನಗೊಳಿಸುವ ಶಿಕ್ಷಕರು ಬೇಕಾಗಿದ್ದಾರೆ. ನೇಮಕಾತಿ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿದರೂ ಏಕೋ ಸಮಸ್ಯೆ ಜೀವಂತಾಗಿವೆ' ಎನ್ನುತ್ತಲೇ ಇಡೀ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮತ್ತು ಕನಸುಗಳನ್ನು ಬಿಚ್ಚಿಟ್ಟುದರ ಜೊತೆಗೆ, ಭವಿಷ್ಯದ ಕನಸುಗಳನ್ನು ಅಲ್ಲಿಯ ನೇತಾರರಾಗಿರುವ, ಈ ಭಾಗಕ್ಕೆ ವಿಶೇಷ ಸ್ಥಾನಮಾನ ದೊರಕಿಸಿದ ರುವಾರಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಕ್ಕೆಕಲ್ಯಾಣ ಸಿರಿ’ಯಲ್ಲಿ ಪಾಲ್ಗೊಂಡ ಎಲ್ಲರೂ ಹೌದೆಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ), ಇಲ್ಲಿಯ ನೀರಾವರಿ ಯೋಜನೆಗಳು, ವಿಕಸಿತ ಕಲ್ಯಾಣ ಕುರಿತ ಚರ್ಚೆ ಚಿಂತನೆಗಳ ಜೊತೆಗೆ, ಸಮಸ್ಯೆಯ ತೊಡಕುಗಳು ಎದ್ದವು. ಇಲ್ಲಿ ನೇಮಕಾತಿ ಪಡೆದವರು ವಿಶೇಷ ಪ್ರಕರಣ' ನಿಯಮದ ಲಾಭ ಪಡೆದು ಬೇರೆಕಡೆ ವರ್ಗಾವಣೆಗೊಳ್ಳುತ್ತಿರುವುದು, ನೇಮಕಾತಿ ಮೀಸಲು ಆದೇಶಗಳು ನ್ಯಾಯಾಲಯದಲ್ಲಿ ಪ್ರಶ್ನಿತವಾಗುತ್ತಿರುವುದನ್ನು, ಸಂಪುಟ ಉಪ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸುವುದರಲ್ಲಿನ ವೈಫಲ್ಯಗಳನ್ನು ಜನ ರಾಜ್ಯದ ಸಚಿವರುಗಳನ್ನು ಯಾವ ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಂಡರು. ಎಲ್ಲಿಯವರೆಗೆ ಎಂದರೆ, ಇವಕ್ಕೆಲ್ಲ ಪರಿಹಾರ ಎಂದು, ಉತ್ತರ ಕೊಟ್ಟು ಹೋಗಿ ಎಂದು ಪಟ್ಟು ಹಿಡಿದು ಕೇಳಿದ್ದು ಎದ್ದು ಕಾಣುವಂತಿತ್ತು. ೩೭೧ (ಜೆ) ವಿಶೇಷ ಸ್ಥಾನಮಾನ ಅನುಷ್ಠಾನದಲ್ಲಿಯ ತಾಂತ್ರಿಕ ತೊಡಕು, ಅಧಿಕಾರಶಾಹಿಗಳ ಅಸಹಕಾರ, ಇಚ್ಛಾಶಕ್ತಿಯ ಕೊರತೆ ಎಲ್ಲಕ್ಕೂ ಕೂಡಕಲ್ಯಾಣ ಸಿರಿ’ ವೇದಿಕೆ ಜನರ ಭಾವನೆಗಳನ್ನು ಸಮರ್ಥವಾಗಿ ಹೊರತೆಗೆಯಿತು. ಸರಿಯಾಗಿ ಸಮಜಾಯಿಷಿ ನೀಡಿದರೂ ಮೂಲ ದೋಷ ಇರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಲ್ಲಿ. ಜನರ ಭೂಮಿಕೆಯಲ್ಲಿ ಎಂಬುದನ್ನು ತೋರ್ಪಡಿಸಲಾಯಿತು.
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಮಾನವ ಸಂಪನ್ಮೂಲ ಅಭಿವೃದ್ಧಿ, ಜೊತೆ ಜೊತೆಗೆ ದೂರದೃಷ್ಟಿಯ, ಸುಸ್ಥಿರ ಯೋಜನೆಗಳ ಅಗತ್ಯವನ್ನು ಪತ್ರಕರ್ತ ಶ್ರೀನಿವಾಸ ಶಿರನೂರಕರ್ ಪ್ರತಿಪಾದಿಸಿದಾಗ ಎಲ್ಲರೂ ಹೌದೆಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾನವ ಸಂಪನ್ಮೂಲ ಮಿಷನ್' ರಚನೆ ಅಗತ್ಯ ಎನ್ನುವುದನ್ನು ಒಪ್ಪಿಕೊಂಡ ಸಚಿವರಿಂದ, ಯೋಜನೆ ರೂಪಿಸುವ ಭರವಸೆಯನ್ನು ಜನತೆಗೆ ದೊರೆಯುವಂತಾಗಿದ್ದು ವಿಶೇಷ. ೩೭೧ (ಜೆ) ಜಾರಿಯ ನಂತರ ಇಲ್ಲಿಯ ಅಭ್ಯುದಯ ಏನು, ಎಂತು ಎಂಬುದರ ಸಮಗ್ರತೆಯ ಜೊತೆಗೆ,ಕಲ್ಯಾಣ ಸಿರಿ’ ಈ ಭಾಗದ ಬೌದ್ಧಿಕ ಹಾಗೂ ಆರೋಗ್ಯದ ಕುರಿತು ವಿಶೇಷ ಚರ್ಚೆಗೆ ವೇದಿಕೆಯಾಯಿತು.
ಹಿರಿಯ ಚಿಂತಕ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ನೀವ್ಯಾಕೆ ನಾವು ಹಿಂದುಳಿದ ಪ್ರದೇಶದವರು, ದಡ್ಡರು ಎಂದು ತಿಳಿದುಕೊಳ್ಳುತ್ತೀರಿ? ನೀವು ದಡ್ಡರಲ್ಲವೇ ಅಲ್ಲ? ಹಿಂದುಳಿದವರೂ ಅಲ್ಲವೇ ಅಲ್ಲ. ಈ ಮನೋಭಾವನೆ, ಅಂಜಿಕೆ ಕಿತ್ತು ಹಾಕಿ. ದಡ್ಡರಿಗೆ ಏನು ವ್ಯಾಖ್ಯಾನ?' ಕಲ್ಯಾಣ ಕ್ರಾಂತಿ, ಬಸವ, ಸೂಫಿ ಸಂತರ ನಾಡು, ಫಲವತ್ತಾದ ಭೂಮಿ ಎಲ್ಲ ಇದ್ದೂ ಕೀಳರಿಮೆ ಏಕೆ? ಎಂದು ನೇರವಾಗಿ ಮಕ್ಕಳನ್ನು ಪ್ರಶ್ನಿಸಿ, ಶಿಕ್ಷಣ, ಮಕ್ಕಳ ಮನೊಭೂಮಿಕೆ ಪರಿವರ್ತನೆಯ ಕುರಿತು ಆಡಿದ ಮಾತು ಇಡೀ ಕಲ್ಯಾಣ ಕರ್ನಾಟಕದ ಮಕ್ಕಳಿಗೆ ಹೊಸ ದಾರಿ-ಬೆಳಕು ರೂಪಿಸಿದಂತಿತ್ತು. ಈ ಭಾಗ ಹೇಗೆ ಅಭಿವೃದ್ಧಿಯಾಗಬೇಕು? ಜನರ ಶೋಷಣೆ ಹೇಗೆ ನಿಲ್ಲಬೇಕು ಎಂಬುದನ್ನು ಸಹಕಾರಿ ಕ್ಷೇತ್ರ ಮಾತ್ರ ತೋರಿಸಿಕೊಡಬಲ್ಲದು ಎಂಬುದನ್ನು ಹಿರಿಯ ಸಹಕಾರಿ ಮನೋಹರ ಮಸ್ಕಿ ತನ್ನ ಅನುಭವದ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟರು. ಇದರಿಂದ ಸೌಹಾರ್ದ ಸಹಕಾರದ ಭಾವನೆ ಇನ್ನಷ್ಟು ಬೆಳೆಯುವಂತಾಯಿತು. ರೈತರು, ಮಕ್ಕಳು, ಉದ್ಯಮಿಗಳು, ಉದ್ಯೋಗ ಮತ್ತು ಆರೋಗ್ಯ ಪರಿಣಿತರು, ಶಿಕ್ಷಣ ತಜ್ಞರು ಎಲ್ಲರೂ ಒಂದೇ ವೇದಿಕೆಯಡಿ, ಒಂದೇ ಸಭಾಂಗಣದಲ್ಲಿ ನೆರೆತು ಚಿಂತನೆ ನಡೆಸುವ ವೇದಿಕೆ ಒದಗಿತ್ತು.ಹೌದು ನಾವ್ಯಾಕೆ ಇಂತಹ ಒಂದು ಸಂವಾದ ನಡೆಸಿಲ್ಲ’ ಎನ್ನುವ ಅಭಿಪ್ರಾಯಕ್ಕೆ ಕೌತುಕದಿಂದಲೇ ಬಂದರು. ಕಲ್ಯಾಣ ಸಿರಿಯಲ್ಲಿ ರಾಜಕೀಯ ನುಸುಳಲಿಲ್ಲ.. ಆದರೆ, ಸವಾಲ್-ಜವಾಬ್‌ಗೆ ಕಮ್ಮಿ ಇರಲಿಲ್ಲ. ಕೃಷ್ಣೆಯ ನೀರಿನ ಸದ್ಬಳಕೆಗಿರುವ ಕೇಂದ್ರದ ಅಡ್ಡಿ, ಆಲಮಟ್ಟಿ ಆಣೆಕಟ್ಟು ಎತ್ತರಿಸಲಿರುವ ಸಮಸ್ಯೆ, ಈನಾಡಿನ ಸಂಪತ್ತು ಸಾವಿರಾರು ಕೋಟಿ ರೂ ಮೌಲ್ಯದ ಬಳ್ಳಾರಿ ಅದಿರು ಲೂಟಿಯಾಯಿತೇ ವಿನಃ ಕಿಂಚಿತ್ತೂ ಅಭಿವೃದ್ಧಿಗೆ ದೊರೆತಿಲ್ಲದಿರುವುದನ್ನು ಸಚಿವ ಎಚ್.ಕೆ. ಪಾಟೀಲ್ ವಿಷಾದ ವ್ಯಕ್ತಪಡಿಸಿದಾಗ, ದೆಹಲಿಗೆ ಮುಕ್ತ ಮನಸ್ಸಿನಿಂದ ನಿಯೋಗ ಬನ್ನಿ, ಬಗೆಹರಿಸೋಣ ಎಂಬ ಆಶ್ವಾಸನೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ.. ಕಲ್ಯಾಣ ಕರ್ನಾಟಕದ ಸಂಕಟ, ಸಮಸ್ಯೆಗಳಿಗೆ ವೇದಿಕೆಯೊಂದು ದೊರೆತ ಸಮಾಧಾನ ಜನರದ್ದು, ಜನಪ್ರತಿನಿಧಿಗಳದ್ದು..
ಕಲ್ಯಾಣದ ನಾಡಿನಲ್ಲಿ.. ಆಗಬೇಕಾದದ್ದು ಸಾಕಷ್ಟಿದೆ. ದೊರಕಬೇಕಾದದ್ದು ಬಹಳಷ್ಟಿದೆ. ಪರಿಹರಿಸಿಕೊಳ್ಳಬೇಕಾದ ತೊಡಕುಗಳು ಇನ್ನೂ ಇವೆ. ಕಲ್ಯಾಣ ಕರ್ನಾಟಕದ ಶಾಸಕರೆಲ್ಲ ಬೆಂಗಳೂರಲ್ಲೇ ನೆಲೆಸುತ್ತಾರೆ. ಆಗೊಮ್ಮೆ ಈಗೊಮ್ಮೆ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ದೊಡ್ಡ ಆರೋಪ ಕಳೆದೊಂದು ದಶಕದ ಹಿಂದೆ ಇತ್ತು. ಕ್ಷಾಮ ಡಾಮರಗಳಿಂದ ಹೊಟ್ಟೆ ಪಾಡಿಗೆ ಸೆಣಸಾಡುತ್ತಿರುವ ಜನ ಊರಲ್ಲಿದ್ದರೆ, ಕ್ಷೇತ್ರದ ಜನಪ್ರತಿನಿಧಿಗಳು ರಾಜಧಾನಿಯಲ್ಲಿ ಬಂಗಲೆ ಕಟ್ಟಿಕೊಂಡು ನೆಮ್ಮದಿಯಿಂದ ಇದ್ದಾರೆ ಎನ್ನುವ ದೊಡ್ಡ ಪುಕಾರು ಇತ್ತು. ಆದರೆ ಈಗ ಹಾಗಿಲ್ಲ. ತಮ್ಮ ಅಸ್ತಿತ್ವ, ರಾಜಕೀಯ ಭವಿಷ್ಯದ ಅಂಜಿಕೆಯಿಂದ ಜನಪ್ರತಿನಿಧಿಗಳು ಜನರ ಮಧ್ಯೆ ಇರುತ್ತಿರುವುದು ಸಮಾಧಾನ ಅಲ್ಲವೇ!.
ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅಂತಿಮವಾಗಿ ಈ ನಾಡಿನ ಜನರಿಗೆ ತುಝೆ ಸಲಾಂ' ಎನ್ನುವ ಹಾಡಿನ ಮೂಲಕ ಸೆಲ್ಯೂಟ್ ಹೊಡೆದರು. ಶತಮಾನ ಕಂಡ, ನಿಜ ಅರ್ಥದಲ್ಲಿ ಲೋಕಕಲ್ಯಾಣವೇ ಕೈಂರ‍್ಯ ಮಾಡಿಕೊಂಡಿರುವ ಲೋಕಶಿಕ್ಷಣ ಟ್ರಸ್ಟ್ ಮಾಧ್ಯಮ ಸಂಸ್ಥೆ ಜನರ ಕಲ್ಯಾಣ ನಾಡಿನ ಧ್ವನಿಯಾದದ್ದು, ಅವರ ಆಗು ಹೋಗುಗಳಿಗೆ ಸ್ಪಂದಿಸಿ ಅದಕ್ಕೊಂದು ಹೊಸ ಕನಸು ಕಟ್ಟಿಕೊಟ್ಟಿದ್ದು, ಹೊಸ ಬೆಳಕು ಬೀರಿದ್ದು ವಿಶೇಷ.ಕಲ್ಯಾಣ ಸಿರಿ’ ಭವಿಷ್ಯತ್ತಿನ ಅಭ್ಯುದಯಕ್ಕೆ ಮಾರ್ಗದರ್ಶನ ಮಾಡಿದ್ದು, ಸೂಫಿ ಶರಣರು, ದಾಸವರೇಣ್ಯ-ಸಂತರ ನಾಡಿನ ಜನಾಶಯಕ್ಕೆ ಧ್ವನಿಯಾಗಿದ್ದು ಸಾರ್ಥಕ ಭಾವವೇ ಸರಿ !