ಕಲುಷಿತ ನೀರು ಕುಡಿದು 15 ಜನರು ಅಸ್ವಸ್ಥ

ಹೂವಿನಹಡಗಲಿ: ತಾಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ನಡೆದಿದೆ.
ಗ್ರಾಮದ ಮೂರನೇ ವಾರ್ಡ್ ಭೋವಿ ಕಾಲೋನಿಯಲ್ಲಿ ಇಂದು ಬೆಳಗ್ಗೆ ವಾಂತಿಬೇಧಿ ಕಾಣಿಸಿಕೊಂಡಿದ್ದು ಸುಮಾರು 15ಕ್ಕೂ ಹೆಚ್ಚು ಜನರು ದಾವಣಗೆರೆ ಹರಪನಹಳ್ಳಿ ಹೂವಿನಡಗಲಿ ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಡಿಯುವ ನೀರು ಸರಬರಾಜು ಪೈಪಿನಲ್ಲಿ ಕಲುಷಿತ ನೀರು ಮಿಶ್ರಣಗೊಂಡಿದ್ದು ಘಟನೆಗೆ ಕಾರಣವೆನ್ನಲಾಗಿದೆ. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಶಾಸಕ ಕೃಷ್ಣ ನಾಯಕ್, ಅಸ್ವಸ್ಥರ ಆರೋಗ್ಯ ವಿಚಾರಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್, ತಾಲೂಕು ಆರೋಗ್ಯ ಅಧಿಕಾರಿ ಸ್ವಪ್ನ ಕಟ್ಟಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಉಮೇಶ್ ಸ್ಥಳೀಯ ವೈದ್ಯಾಧಿಕಾರಿ ನಾಗಭೂಷಣ ಹಾಜರಿದ್ದರು.