ಶ್ರೀ ಶಂಕರ ಭಗವತ್ಪಾದರ ಉತ್ಸವಗಳು ದೇಶದಲ್ಲೆಲ್ಲ ನಡೆದವು. ವಿಶ್ವದ ಬೇರೆ ಕಡೆಗಳಲ್ಲಿಯೂ ನಡೆದಿರಬಹುದು. ಶಂಕರ ಭಗವತ್ಪಾದರ ಹೆಸರು ಬಂದಾಗಲೆಲ್ಲ ಅದ್ವೈತ ಸಿದ್ಧಾಂತ'ದ ನೆನಪಾಗುತ್ತದೆ.
ಅದ್ವೈತ’ ಎಂದರೆ ದ್ವೈತವಿಲ್ಲದ್ದು. ದ್ವೈತ' ಎಂದರೆ ಭೇದ.
ಪರಬ್ರಹ್ಮದಲ್ಲಿ ಪರಮಾರ್ಥತಃ ಯಾವುದೇ ರೀತಿಯ ಭೇದವಿಲ್ಲ’ ಎಂಬುದು ಅದ್ವೈತ ಶಬ್ದದ ತಾತ್ಪರ್ಯ.
ಶಂಕರ ಭಗವತ್ಪಾದರ ಈ ಅಭೇದ ಸಿದ್ಧಾಂತವು ಭೇದಸಹಿಷ್ಣುವಾಗಿದೆ. ಅಂದರೆ ದ್ವೈತವನ್ನು ಸಹಿಸಿಕೊಳ್ಳುತ್ತದೆ. ಉಪನಿಷತ್ತುಗಳು ಹೇಳುವ ಏಕಮೇವಾದ್ವಿತೀಯಂ' ಬ್ರಹ್ಮಚೈತನ್ಯದಲ್ಲಿಯೇ ಈ ಭೇದಪ್ರಪಂಚವೆಲ್ಲ ನಿಂತಿದೆ. ತೋರುವ ಈ ಎಲ್ಲ ಪ್ರಪಂಚಗಳಿಗೂ ಆ ಅದ್ವಿತೀಯ ಬ್ರಹ್ಮವೇ ತಳಹದಿಯಾಗಿದೆ. ಹಾಗಾಗಿ ಅನೇಕ ದ್ವೈತಗಳೊಂದಿಗೆ ಗೋಚರವಾಗುತ್ತಿರುವ ಈ ಪ್ರಪಂಚಗಳನ್ನು ಆ ಪರಬ್ರಹ್ಮವು ತನ್ನದೇ ಆದ ರೀತಿಯಲ್ಲಿ ಹೊತ್ತುಕೊಂಡಿದೆ. ತಾನೇ ಅದನ್ನು ಹೊತ್ತುಕೊಂಡಿದೆ ಎಂದರೆ, ಅದರ ಜೊತೆ ತನಗೆ ವಿರೋಧವಿಲ್ಲ ಎಂದರ್ಥ. ಹೊತ್ತುಕೊಂಡಿದ್ದು ಮಾತ್ರವಲ್ಲ, ಆ ಪ್ರಪಂಚಕ್ಕೆ ತನ್ನ ಸ್ವರೂಪವಾಗಿರುವ
ಇರುವಿಕೆ, ತೋರುವಿಕೆ, ಇಷ್ಟವಾಗುವಿಕೆಗಳನ್ನು’ (ಸತ್-ಚಿತ್-ಆನಂದ) ಕೊಟ್ಟಿವೆ. ಬ್ರಹ್ಮವು ಪ್ರಪಂಚವನ್ನು ಪೋಷಿಸುತ್ತಿದೆ. ಆದ್ದರಿಂದ ಆ ಪರಬ್ರಹ್ಮನಿಗೆ ಭೇದಪ್ರಪಂಚದ ಕುರಿತು ದ್ವೇಷವಿಲ್ಲ.
ಅಲ್ಲದೆ ಆ ಅದ್ವೈತ ಬ್ರಹ್ಮವನ್ನು ದ್ವೈತದ ಮೂಲಕವೇ ತಲುಪಬೇಕು, ಬೇರೆ ದಾರಿಯಿಲ್ಲ. ನಮ್ಮೆಲ್ಲರ ಶರೀರದೊಳಗೆ ನಮ್ಮ ಜೊತೆ ಪರಮಾತ್ಮನಿದ್ದಾನೆ, ಹೃದಯದಲ್ಲೇ ಇದ್ದಾನೆ. ಗುಹಾಂ ಪ್ರವಿಷ್ಟೌ ಪರಮೇ ಪರಾರ್ಧೇ' (ಕಠ: ೩.೧). ಇನ್ನೊಂದೆಡೆ ಇದನ್ನೇ ಮುಂಡಕ ಉಪನಿಷತ್ತು,
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ’ (೩.೧.೧) ಎಂದು ವರ್ಣಿಸುತ್ತದೆ. ಅಂದರೆ, ಎರಡು ಹಕ್ಕಿಗಳು ಶರೀರವೆಂಬ ಒಂದೇ ಮರದಲ್ಲಿ ಕುಳಿತಿವೆ. ಜೀವಾತ್ಮ ಮತ್ತು ಪರಮಾತ್ಮರೇ ಆ ಎರಡು ಹಕ್ಕಿಗಳು. ಎರಡು ಎಂದರೆ ದ್ವೈತ. ಈ ದ್ವೈತವನ್ನು ಅರ್ಥಮಾಡಿಕೊಂಡರೆ ಮಾತ್ರವೇ ಮುಂದೆ ಕ್ರಮೇಣ ಅವರಲ್ಲಿರುವ ಅದ್ವೈತ ಗೊತ್ತಾಗುತ್ತದೆ. ಈ ದ್ವೈತ ಗೊತ್ತಾಗದಿದ್ದರೆ ಆ ಅದ್ವೈತ ಗೊತ್ತಾಗುವುದಿಲ್ಲ. ಆದ್ದರಿಂದ ದ್ವೈತವೇ ಅದ್ವೈತವನ್ನು ತಲುಪಲು ಮೂಲ ಪೀಠಿಕೆ. ಈ ಅರ್ಥದಲ್ಲಿಯೂ ಅದ್ವೈತವು ದ್ವೈತಸಹಿಷ್ಣುವಾಗಿದೆ.
ಹಾಗೆಯೇ ಇನ್ನೊಂದು ಅಂಶ. ಶಂಕರರ ಅದ್ವೈತಜ್ಞಾನವು ಕರ್ಮಸಹಿಷ್ಣುವಾಗಿದೆ. ಶಂಕರರು ಸಂಪೂರ್ಣ ನೈಷ್ಕರ್ಮ್ಯ ಸ್ಥಿತಿಯನ್ನು ಒಪ್ಪುತ್ತಾರೆ. ಅಂದರೆ, ಒಂದು ಎತ್ತರದ ಸ್ಥಿತಿಗೆ ಏರಿದಾಗ ಎಲ್ಲ ಕರ್ಮಗಳನ್ನೂ ಸಂಪೂರ್ಣ ಬಿಟ್ಟಿರಲು ಸಾಧ್ಯ. ಉಸಿರಾಟ, ಆಹಾರ, ನಿದ್ರೆಗಳಂತಹ ತೀರ ಸಹಜ ಕ್ರಿಯೆಗಳನ್ನೂ ಬಿಟ್ಟಿರಲು ಸಾಧ್ಯವಿದೆ. ಉಳಿದ ಆಸ್ತಿಕ ದಾರ್ಶನಿಕರು ನೈಷ್ಕರ್ಮ್ಯ ಸಿದ್ಧಿಯನ್ನು ಅಷ್ಟೊಂದು ಒಪ್ಪುವುದಿಲ್ಲ. ನಿತ್ಯಕರ್ಮಗಳನ್ನು ಬಿಡಲು ಬರುವುದಿಲ್ಲ ಎನ್ನುತ್ತಾರೆ. ಉಸಿರಾಟ, ಆಹಾರ, ನಿದ್ರೆಗಳನ್ನು ಬಿಡುವುದನ್ನು ಜನಸಾಮಾನ್ಯರು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ. ಆದರೂ ಸಾಧನೆಯ ಎತ್ತರದಲ್ಲಿ ಅಂಥ ಕರ್ಮಾತೀತ ಸ್ಥಿತಿ ಸಾಧ್ಯವಿದೆ ಎನ್ನುತ್ತದೆ ಶಂಕರರ ಅದ್ವೈತ ವೇದಾಂತ.
ಇಷ್ಟೊಂದು ಕಠೋರ ನೈಷ್ಕರ್ಮ್ಯವಾದಿಗಳಾಗಿದ್ದರೂ, ಸರ್ವಕರ್ಮ ಸಂನ್ಯಾಸಪೂರ್ವಕ ಆತ್ಮಜ್ಞಾನದಿಂದಲೇ ಮೋಕ್ಷ ಎಂದು ಪ್ರತಿಪಾದಿಸುತ್ತಿದ್ದರೂ, ಆ ಸ್ಥಿತಿಗೆ ಏರಲು ಕರ್ಮಗಳೇ ಮೂಲ ಪೀಠಿಕೆ ಎನ್ನುತ್ತಾರೆ ಶಂಕರರು. ತಮೇತಂ ವೇದಾನುವಚನೇನ ಬ್ರಾಹ್ಮಣಾ ವಿವಿದಿಷಂತಿ ಯಜ್ಞೇನ ದಾನೇನ ತಪಸಾ ಅನಾಶಕೇನ' (ಬೃ.ಉ.: ೪.೪.೨೨) ಯಜ್ಞ, ದಾನ, ತಪಸ್ಸು ಮುಂತಾದ ಎಲ್ಲ ಒಳ್ಳೆಯ ಕರ್ಮಗಳೂ ಚಿತ್ತಶುದ್ಧಿಯ ಮೂಲಕ ಆ ಸರ್ವಕರ್ಮ ಸಂನ್ಯಾಸದ ಸ್ಥಿತಿಗೆ ಒಯ್ಯುತ್ತವೆ. ಈ ನೈಷ್ಕರ್ಮ್ಯವು ಕರ್ಮಾಚರಣೆಯಿಂದ ಬರುತ್ತದೆ. ಸುಮ್ಮನೆ ಕರ್ಮ ಬಿಟ್ಟಿದ್ದರಿಂದ ಬರುವುದಿಲ್ಲ.
ನ ಕರ್ಮಣಾಂ ಅನಾರಂಭಾತ್ ನೈಷ್ಕರ್ಮ್ಯಂ ಪುರುಷೋಶ್ನುತೇ’ (ಭ.ಗೀ.: ೩.೪). ಹೀಗೆ ಅದ್ವೈತಜ್ಞಾನವು ಕಠೋರ ನೈಷ್ಕರ್ಮ್ಯದಿಂದ ಕೂಡಿದ್ದರೂ ಕರ್ಮಸಹಿಷ್ಣುವಾಗಿದೆ.