ಕರೆ ಮಾಡಿರುವ ಚಂದಾದಾರರು ತಲೆ ಬಾಚಿಕೊಳ್ಳುತ್ತಿದ್ದಾರೆ….

ಕಳೆದ ಹಲವಾರು ತಿಂಗಳಿನಿಂದ ಏನೇನೋ ಆಗುತ್ತದೆಯಲ್ಲ? ಯಾಕೆ ಅಂತ ಗೊತ್ತಾಗುತ್ತಿಲ್ಲ ಎಂದು ಆಕಾಶ ನೋಡುತ್ತ ಅಂಗಳದಲ್ಲಿ ಕುಳಿತ ಮದ್ರಾಮಣ್ಣನವರಿಗೆ ಅವತ್ತು ಟ್ರಂಪೇಸಿ ಹೇಳಿದ್ದು ನೆನಪಾಯಿತು. ನನಗೆ ಎಲ್ಲಿಲ್ಲದ ಕಷ್ಟ ಇತ್ತು ಗೊತ್ತಾ? ನನಗೆ ಏನೇನು ಮಾಡಿದರು ಗೊತ್ತ? ನನ್ನ ಬೆನ್ನ ಹಿಂದೆ ಇದ್ದುಕೊಂಡವರೇ ನನ್ನ ಬಗ್ಗೆ….. ಅಯ್ಯಯ್ಯೋ ಈ ಬಾಯಿಯಿಂದ ಹೇಳಲಾರೆ.. ಹೇಳಲಾರೆ. ಕೊನೆಗೆ ಏನು ಮಾಡಬೇಕೋ ಅದನ್ನು ಮಾಡಿದೆ ಈಗ ನೋಡು ಎಲ್ಲರೂ ಎಂದು ಗಹಗಹಿಸಿ ನಕ್ಕಿದ್ದರು. ಓಹೋ ಆತನನ್ನೇ ಕೇಳೋಣ ಎಂದು ಅಂದುಕೊಂಡ ಮದ್ರಾಮಣ್ಣನವರು ಈ ಟೈಮಲ್ಲಿ ಎಲ್ಲಿರ್ತಾನೋ ಏನೋ ಆದರೂ ಕಾಲ್ ಮಾಡಿ ಕೇಳುತ್ತೇನೆ ಎಂದು ಮೊಬೈಲ್ ತೆಗೆದವರೇ ನಂಬರ್ ತಿರುಗಿಸಿದರು… ಆ ಕಡೆಯಿಂದ ಹಲೋ ಅಂದಾಗ… ಮದ್ರಾಮಣ್ಣನವರೂ ಸಹ ಅಲೋ…ಅಲೋ…ಅಲೋ ಎಂದು ಐದಾರು ಬಾರಿ ಅಂದರು. ಅದು ಕಟ್ ಆಯಿತು. ಮತ್ತೆ ಕರೆ ಮಾಡಿದರಾಯಿತು ಎಂದು ರೀ ಡಯಲ್ ಒತ್ತಿದಾಗ… ನೀವು ಕರೆ ಮಾಡಿರುವ ಚಂದಾದಾರರು ತಲೆ ಬಾಚಿಕೊಳ್ಳುತ್ತಿದ್ದಾರೆ ಎಂದು ಆ ಕಡೆಯಿಂದ ವಯ್ಯಾರದ ಧ್ವನಿ ಬಂದಾಗ…. ತಲೆ ಬಾಚ್ಕೊತಿದಾನಂತೆ ಎಂದು ಈ ಯಮ್ಮ ಹೇಳುತ್ತಿದ್ದಾಳೆ ಸ್ವಲ್ಪ ಹೊತ್ತು ಬಿಟ್ಟು ಮಾತಾಡನ… ಕೆಂಪ್ ಕೂದಲನ್ನು ಬಾಚಿಕೊಳ್ಳಲಿ ಎಂದು ಸುಮ್ಮನಾದರು. ಮತ್ತೆ ಐದು ನಿಮಿಷ ಬಿಟ್ಟು ಮಾಡಿದಾಗ…. ನೀವು ಕರೆ ಮಾಡಿರುವ ಚಂದಾದಾರರು ಶರ್ಟ್ಗೆ ಸೇಂಟ್ ಹಾಕಿಕೊಳ್ಳುತ್ತಿದ್ದಾರೆ ಎಂದಳು…. ಮತ್ತೆ ಐದು ನಿಮಿಷ ಬಿಟ್ಟು ಮಾಡಿದರೆ…. ನೀವು ಕರೆ ಮಾಡಿರುವ ಚಂದಾದಾರರು ಈಗ ಚಪ್ಪಲಿ ಹಾಕಿಕೊಂಡು ಇಲ್ಲೇ ಹೋಗಿಬರ್ತೀನಿ ಎಂದು ಹೊರಗಡೆ ಹೋದರು…. ಎಂದು ಹೇಳಿದಳು. ಅಲ್ರಮ್ಮ ಅವರು ಯಾವಾಗ ವಾಪಸ್ ಬರುತ್ತಾರೆ ಎಂದು ಕೇಳಿದಾಗ ಆ ಕಡೆಯಿಂದ ಫೋನ್ ಕಟ್ ಆಯಿತು. ಮತ್ತೆ ಐದು ನಿಮಿಷ ಬಿಟ್ಟು ಕರೆ ಮಾಡಿದರೆ… ನೀವು ಕರೆ ಮಾಡಿರುವ ಚಂದಾದಾರರು, ಯಾಕೆ ಹಗಲೆಲ್ಲ ಫೋನ್ ಮಾಡುತ್ತೀರಿ ಎಂದು ಕೇಳಿದ್ದಾರೆ ಎಂದಾಗ… ನೋಡವ.. ನನಗೆ ಏನರ ಮಾತಾಡಕೆ ಹೋದರೆ ಏನೇನೋ ಆಗ್ತಾ ಇದೆ ಅದಕ್ಕೆ ಕಾಲ್ ಮಾಡಿದ್ದೆ ಎಂದರು. ಆಯಿತು ಆ ಚಂದಾದಾರರಿಗೆ ಹೇಳುತ್ತೇನೆ. ಏನಿದ್ದರೂ ಅವರ ಅನುಷ್ಠಾನ ಮುಗಿದ ಮೇಲೆ ಮಾಡಿರಿ. ಅದಕ್ಕಿಂತ ಮುಂಚೆ ಮಾಡಿದರೆ ಮತ್ತೆ ಏನೇನೋ ಆಗುವ ಸಂಭವ ಹೆಚ್ಚಿರುತ್ತದೆ ತಿಳಿಯಿರಿ.. ತಿಳಿಯಿರಿ… ತಿಳಿಯಿರಿ ಎಂದು ಕೋರ್ಟಿನಲ್ಲಿ ಹೇಳುವಂತೆ ಮೂರು ಬಾರಿ ಹೇಳಿದಳು. ಈ ಫೋನಿನ ಸಹವಾಸವೇ ಬೇಡ ಎಂದು ಮದ್ರಾಮಣ್ಣ ಸ್ವಿಚ್ಡಾಫ್ ಮಾಡಿ ಟೀಪಾಯ್ ಮೇಲೆ ಎಸೆದರು.